ಕುಶಾಲನಗರ, ಮಾ 29: ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಕೇಂದ್ರದಲ್ಲಿ ಸಧ್ಯದಲ್ಲಿಯೇ ರೈತ ಸಂತೆ ಪ್ರಾರಂಭಗೊಳ್ಳಲಿದೆ. ಈ ಸಂಬಂಧ ಕುಶಾಲನಗರದ ಮೈಸೂರು ರಸ್ತೆಯ ಆರ್‍ಎಂಸಿ ಯಾರ್ಡ್‍ನಲ್ಲಿ ಅಂದಾಜು 1.5 ಕೋಟಿ ರೂ. ವೆಚ್ಚದಲ್ಲಿ 4 ಪ್ಲ್ಯಾಟ್‍ಫಾರಂ ಗಳನ್ನು ನಿರ್ಮಿಸಲಾಗಿದೆ.

ರೈತರು ತಾವು ಬೆಳೆದ ಬೆಳೆಯನ್ನು ನೇರವಾಗಿ ಮಾರುಕಟ್ಟೆಗೆ ತರುವ ಕಾರ್ಯಕ್ರಮ ಇದಾಗಿದ್ದು ಉಚಿತವಾಗಿ ರೈತರಿಗೆ ತಮ್ಮ ಕೃಷಿ ಬೆಳೆಗಳ ಮಾರಾಟಕ್ಕೆ ಮಾರುಕಟ್ಟೆ ಸಮಿತಿ ಎಲ್ಲಾ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸುವ ಯೋಜನೆ ಅಂತಿಮ ಹಂತದಲ್ಲಿದೆ. ಇದರೊಂದಿಗೆ ಸಾವಿರ ಮೆಟ್ರಿಕ್ ಟನ್ ಪ್ರಮಾಣದ ಕೃಷಿ ಉತ್ಪನ್ನಗಳ ಶೇಖರಣೆಗೆ ನೂತನ ಗೋದಾಮು ಕೂಡ ನಿರ್ಮಾಣಗೊಂಡಿದೆ. ರಸ್ತೆ, ಕುಡಿವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾಮಗಾರಿ ಅಂತಿಮ ಹಂತದಲ್ಲಿದೆ. ಈ ಮೂಲಕ ಕುಶಾಲನಗರದಲ್ಲಿ ವಾರದ ಎಲ್ಲಾ ದಿನಗಳಲ್ಲಿ ರೈತರು ಸಂತೆ ವ್ಯಾಪಾರ ಮಾಡಲು ಮಾರುಕಟ್ಟೆ ಸಮಿತಿ ಅವಕಾಶ ಕಲ್ಪಿಸಿದಂತಾಗುತ್ತದೆ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ರೈತರಿಗೆ ಮತ್ತು ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಸೋಮವಾರಪೇಟೆ ಆರ್‍ಎಂಸಿ ವರ್ತಕರ ಪ್ರತಿನಿಧಿ ಭೀಮಯ್ಯ ತಿಳಿಸಿದ್ದಾರೆ. ಮುಂದಿನ 1 ತಿಂಗಳ ಒಳಗೆ ಕಾಮಗಾರಿ ಸಂಪೂರ್ಣ ಮುಗಿಯಲಿದ್ದು ಲೋಕಾರ್ಪಣೆಗೊಳ್ಳಲಿದೆ ಎಂದಿದ್ದಾರೆ. ಕುಶಾಲನಗರದಲ್ಲಿ ಮಧ್ಯವರ್ತಿಗಳು ರೈತರ ಉತ್ಪನ್ನಗಳನ್ನು ಖರೀದಿಸಿದ ಸಂದರ್ಭ ರೈತರಿಗೆ ಸಮರ್ಪಕವಾದ ಬೆಲೆ ಸಿಗದಿರುವದು ಈ ಯೋಜನೆಯ ಮೂಲಕ ತಪ್ಪುವದರೊಂದಿಗೆ ರೈತರು ಬೆಳೆದ ಬೆಳೆಯನ್ನು ನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಉಚಿತವಾಗಿ ಅವಕಾಶ ಕಲ್ಪಿಸಲಾಗುವದು ಎಂದಿದ್ದಾರೆ.

ಈಗಾಗಲೆ 4 ಪ್ಲ್ಯಾಟ್‍ಫಾರಂ ಗಳನ್ನು ಆವರಣದಲ್ಲಿ ನಿರ್ಮಿಸಲಾಗಿದ್ದು ಹೆಚ್ಚುವರಿ ಪ್ಲ್ಯಾಟ್‍ಫಾರಂ ನಿರ್ಮಾಣಕ್ಕೆ ನಬಾರ್ಡ್ ರೂ. 1 ಕೋಟಿ ನೀಡಲು ಮುಂದೆ ಬಂದಿದೆ. ಸೋಮವಾರಪೇಟೆ ಮತ್ತು ಕುಶಾಲನಗರ ಆರ್‍ಎಂಸಿ ಯಾರ್ಡ್‍ಗಳಲ್ಲಿ ಪ್ಲ್ಯಾಟ್‍ಫಾರಂಗಳು ನಿರ್ಮಾಣಗೊಳ್ಳಲಿದ್ದು ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ಆರ್‍ಎಂಸಿ ಕಛೇರಿ ಅಧಿಕಾರಿಯಾದ ರವಿಕುಮಾರ್ ‘ಶಕ್ತಿ’ಯೊಂದಿಗೆ ಮಾಹಿತಿ ಒದಗಿಸಿದ್ದಾರೆ.

ಅಂದಾಜು ರೂ. 55 ಲಕ್ಷ ವೆಚ್ಚದಲ್ಲಿ ಕುಶಾಲನಗರದ ಆರ್‍ಎಂಸಿ ಯಾರ್ಡ್‍ನ ಎರಡು ಮುಖ್ಯದ್ವಾರಗಳು ಹಾಗೂ ನೂತನವಾಗಿ 4 ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ವಾರ್ಷಿಕ ಸೆಸ್ ಸಂಗ್ರಹದ ಗುರಿ ರೂ. 2 ಕೋಟಿ 25 ಲಕ್ಷ ಹೊಂದಲಾಗಿದ್ದು ಇದುವರೆಗೆ ರೂ. 1.35 ಕೋಟಿ ಸಂಗ್ರಹವಾಗಿದೆ. ಕಳೆದ ಸಾಲಿನಲ್ಲಿ ರೂ. 92 ಲಕ್ಷ ಸೆಸ್ ಸಂಗ್ರಹವಾಗಿರುವದಾಗಿ ಅವರು ತಿಳಿಸಿದ್ದಾರೆ.

ಭತ್ತ ಬೆಳೆಗೆ ಸರಕಾರ ಬೆಂಬಲ ಬೆಲೆ ನಿಗದಿ ಮಾಡಿದ್ದು ಸಾಮಾನ್ಯ ಭತ್ತಕ್ಕೆ ರೂ. 1550 ಹಾಗೂ ಎ ದರ್ಜೆ ಭತ್ತಕ್ಕೆ ರೂ. 1590 ನಿಗದಿ ಮಾಡಲಾಗಿದೆ. ಈ ಬಾರಿ ಭತ್ತದ ಉತ್ಪಾದನೆ ಕಡಿಮೆಯಾಗಿರುವದಾಗಿ ರವಿಕುಮಾರ್ ತಿಳಿಸಿದ್ದಾರೆ.

ಕುಶಾಲನಗರ ವಾರದ ಸಂತೆ ಮತ್ತು ಇತರ ಮಾರುಕಟ್ಟೆಗಳು ಪಟ್ಟಣದ ಕೆಇಬಿ ಕಛೇರಿ ಮುಂಭಾಗ ಅಪಾಯಕಾರಿ ವ್ಯವಸ್ಥೆಯಲ್ಲಿ ನಡೆಯುತ್ತಿದ್ದು ಇದನ್ನು ತಕ್ಷಣ ಸ್ಥಳಾಂತರಿಸುವಂತೆ ಕುಶಾಲನಗರ ಗೆಳೆಯರ ಬಳಗ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದೆ. ಮಾರುಕಟ್ಟೆ ಆವರಣದ ಮೇಲ್ಭಾಗದಲ್ಲಿ 220 ಕೆವಿ ಸಾಮಥ್ರ್ಯ ಸೇರಿದ ವಿವಿಧ ಅಪಾಯಕಾರಿ ವಿದ್ಯುತ್ ತಂತಿಗಳು ಹಾದು ಹೋಗುತ್ತಿದ್ದು ಈ ಬಗ್ಗೆ ಕ್ರಮಕೈಗೊಳ್ಳಲು ಸ್ಥಳೀಯ ಪಟ್ಟಣ ಪಂಚಾಯ್ತಿ ಆಡಳಿತ ಮಂಡಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ತಿಳಿಸಿರುವ ಗೆಳೆಯರ ಬಳಗದ ಅಧ್ಯಕ್ಷರಾದ ವಿ.ಎಸ್.ಆನಂದಕುಮಾರ್ ಮತ್ತು ಹೆಚ್.ಟಿ.ವಸಂತ್ ಈ ಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಕೂಡಲೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. -ವರದಿ : ಚಂದ್ರಮೋಹನ್