ಗೋಣಿಕೊಪ್ಪ ವರದಿ, ಮಾ. 29: ಬಸ್ ಹಾಗೂ ಜೀಪ್ ನಡುವೆ ಡಿಕ್ಕಿಯಾಗಿ ಒಂದೇ ಕುಟುಂಬದ ನಾಲ್ವರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಜೀಪ್ನಲ್ಲಿ ಪ್ರಯಾಣಿಸುತ್ತಿದ್ದ ಸ್ಥಳಿಯರುಗಳಾದ ಮೋಹನ್ ಭೀಮಯ್ಯ (45), ಶಾಂತಾ (42), ಅಜಿತ್ (28), ಧ್ಯಾನ್ ತಮ್ಮಯ್ಯ (13) ಗಾಯಗೊಂಡವರು. ಗಾಯಾಳುಗಳನ್ನು ಮೈಸೂರು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುವಾರ ಮುಂಜಾನೆ 3 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಮೈಸೂರಿನಿಂದ ತಲಚೇರಿಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಮಂಗಳೂರಿನಿಂದ ಬರುತ್ತಿದ್ದ ಜೀಪ್ ನಡುವೆ ಇಲ್ಲಿನ ಉಮಾಮಹೇಶ್ವರಿ ದೇವಸ್ಥಾನ ಎದುರು ಡಿಕ್ಕಿ ಸಂಭವಿಸಿದೆ. ಪರಿಣಾಮ ಬಸ್ ದೇವಸ್ಥಾನದ ತಡೆಗೋಡೆಗೆ ಡಿಕ್ಕಿ ಹೊಡೆದು ನಿಂತುಕೊಂಡಿತು. ಇದರಿಂದ ತಡೆಗೋಡೆ ಕುಸಿದು ಬಿದ್ದಿದ್ದು, ಜೀಪ್ ನಲ್ಲಿದ್ದ ತಂದೆ, ತಾಯಿ ಮಕ್ಕಳಿಗೆ ಗಾಯ ವಾಗಿದೆ. ಗಾಯಾಳು ಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.