ವೀರಾಜಪೇಟೆ, ಮಾ. 29: ವೀರಾಜಪೇಟೆ ಬಳಿಯ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲಂಗಾಲ ಗ್ರಾಮದ ಕೋಡಿರ ಪ್ರವೀಣ್ ಎಂಬವರ ಕಾಫಿ ತೋಟದಲ್ಲಿ ಇಂದು ಬೆಳಿಗ್ಗೆ ಕಾಡಾನೆಯ ಕಳೇಬರ ದೊರೆತಿದ್ದು, ಯಾರೋ ದುಷ್ಕರ್ಮಿಗಳು ಆನೆಗೆ ಗುಂಡು ಹೊಡೆದು ಹತ್ಯೆಗೈದಿರಬಹುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇಲಾಖಾಧಿಕಾರಿಗಳು ಮುಂದಿನ ಕ್ರಮಕ್ಕಾಗಿ ಇಲ್ಲಿನ ಸಮುಚ್ಚಯ ನ್ಯಾಯಾಲಯಕ್ಕೆ ಪ್ರಥಮ ದೂರು ಸಲ್ಲಿಸಿದ್ದಾರೆ.
ತೋಟದ ಕಾರ್ಮಿಕರು ಎಂದಿನಂತೆ ಇಂದು ಕೆಲಸಕ್ಕೆ ತೆರಳಿದ ಸಂದರ್ಭ ಕಾಫಿ ತೋಟದಲ್ಲಿ ಒಂಟಿ ಸಲಗದ ಕಳೇಬರ ಕಂಡು ಮಾಲೀಕರಿಗೆ ತಿಳಿಸಿದ್ದಾರೆ. ಮಾಲೀಕರು ಅರಣ್ಯ ಇಲಾಖೆ ಹಾಗೂ ಇಲ್ಲಿನ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.
ವೀರಾಜಪೇಟೆ ವಿಭಾಗದ ಅರಣ್ಯಾಧಿಕಾರಿಗೆ ಮೊಬೈಲ್ ಮೂಲಕ ದೂರು ಬಂದಾಗ ವಲಯಾರಣ್ಯಾಧಿಕಾರಿ ಗೋಪಾಲ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರೋಷಿಣಿ, ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಮಹಜರು ನಡೆಸಿದರು. ನಂತರ ಇಲ್ಲಿನ ಪಶು ವೈದ್ಯಾಧಿಕಾರಿಯಿಂದ ಮರಣೋತ್ತರ ಪರೀಕ್ಷೆ ನಡೆಯಿತು.
ಅರಣ್ಯ ಅಧಿಕಾರಿಗಳ ಪ್ರಕಾರ ಸುಮಾರು 30ವರ್ಷದ ಎರಡು ದಂತಗಳಿರುವ ಕಾಡಾನೆಗೆ ರಾತ್ರಿ ಅಥವಾ ಬೆಳಗಿನ ಜಾವ ಗುಂಡು ಹಾರಿಸಿರಬಹುದು ಕಾಡಾನೆ ಗುಂಡೇಟಿನಿಂದ ಹತ್ಯೆಯಾಗಿರಬಹುದು ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಆನೆಯ ಬೆನ್ನಿನ ಮೇಲೆ ಗುಂಡು ಹೊಡೆದ ಗಾಯಗಳಿದ್ದು ವೈದ್ಯಕೀಯ ಪರೀಕ್ಷೆಯಿಂದ ಖಚಿತ ಪಡಿಸಬೇಕಾಗಿದೆ.
ಇಂದು ಬೆಳಿಗ್ಗೆ ಕಾಡಾನೆ ಹತ್ಯೆಯ ಸುದ್ದಿ ಹರಡುತ್ತಲೇ ನೆರೆಕರೆಯ ನೂರಾರು ಮಂದಿ ಗ್ರಾಮಸ್ಥರು ಕೃತ್ಯ ನಡೆದ ಸ್ಥಳದಲ್ಲಿ ಜಮಾಯಿಸಿದ್ದರು. ಕಾಡಾನೆ ಕಳೇಬರ ಇದ್ದ ಸ್ಥಳಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ಎನ್. ಕುಮಾರ್ ಆರಾಧ್ಯ, ಗ್ರಾಮಾಂತರ ಪೊಲೀಸರು ತೆರಳಿ ಮಹಜರು ನಡೆಸಿದರು.
ಅರಣ್ಯ ಇಲಾಖೆ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಥಮ ವರದಿಯನ್ನು ನ್ಯಾಯಾಲಯ ಪರಿಶೀಲಿಸಿದ ನಂತರ ಪ್ರಕರಣದ ತನಿಖೆ ನಡೆಸಲು ಪೊಲೀಸರಿಗೆ ಆದೇಶಿಸಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಕೊಡಗಿನಲ್ಲಿ ತಿಂಗಳಿನಲ್ಲಿ ಒಟ್ಟು 6 ಆನೆಗಳು ವಿವಿಧ ರೀತಿಯಲ್ಲಿ ಸಾವಿಗೀಡಾದಂತಾಗಿದೆ.