ಕೂಡಿಗೆ, ಮಾ. 28: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬಾಲೆ ಮುಖ್ಯ ಬೀದಿಗಳಾದ ಕಾಸರಗೋಡ್ ಬೀದಿ, ಚಿಕ್ಕಳ್ಳಿ ಬೀದಿ, ಹಳೆಗೋಟೆ ವ್ಯಾಪ್ತಿಗಳಲ್ಲಿ 100 ಕ್ಕೂ ಹೆಚ್ಚು ಧಾನ್ಯ ಸಂಗ್ರಹದ ಗುಂಡಿಗಳು (ಹಗೇವು) ಪತ್ತೆಯಾಗಿವೆ. 150 ವರ್ಷಗಳ ಹಿಂದೆ ಈ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಗ್ರಾಮಸ್ಥರು ಜಮೀನುಗಳಲ್ಲಿ ಬೆಳೆದ ರಾಗಿಯನ್ನು ಸಂಗ್ರಹಿಸಲು ಮನೆಯಲ್ಲಿ ಸ್ಥಳವಿಲ್ಲದಿದ್ದುದರಿಂದ ಮನೆಯ ಅಕ್ಕಪಕ್ಕದ ಜಾಗದಲ್ಲಿ ನೆಲದಲ್ಲಿ 10 ರಿಂದ 15 ಅಡಿ ಆಳದ ಗುಂಡಿಗಳನ್ನು ತೋಡಿ ಅದರೊಳಗೆ ಮಣ್ಣು ಕುಸಿಯದ ಹಾಗೆ ಕಲ್ಲಿನಿಂದ ಕಟ್ಟಿ, ಮೇಲ್ಭಾಗಕ್ಕೆ ಕಲ್ಲಿನ ಚಪ್ಪಡಿಯನ್ನು ಇಟ್ಟು ಅದರೊಳಗೆ ತಾವು ಬೆಳೆದ ರಾಗಿ ಹಾಗೂ ಧಾನ್ಯಗಳನ್ನು ತುಂಬಿಸಿ, ವರ್ಷಗಟ್ಟಲೇ ಸಂಗ್ರಹಿಸುತ್ತಿದ್ದರು. ತಮಗೆ ಬೇಕಾದಾಗ ಏಣಿಯ ಸಹಾಯದಿಂದ ಗುಂಡಿಯೊಳಗೆ ಇಳಿದು ಧಾನ್ಯಗಳನ್ನು ತೆಗೆದು ಉಪಯೋಗಿಸುತ್ತಿದ್ದರು. ಈ ವ್ಯಾಪ್ತಿಯಲ್ಲಿ ಹಲವಾರು ಹಗೇವುಗಳು ಇದ್ದು, ಅದರ ಮೇಲೆಯೇ ಮನೆಯನ್ನು ನಿರ್ಮಿಸಿ ವಾಸಿಸುತ್ತಿದ್ದಾರೆ ಎಂದು ಹೆಬ್ಬಾಲೆ ಕಾಸರಗೋಡ್ ಬೀದಿಯ ನಿವಾಸಿ 88 ಪ್ರಾಯದ ಅಕ್ಕಮ್ಮ ಅವರು ಹಗೇವು ಪತ್ತೆಯಾದ ಸ್ಥಳಕ್ಕೆ ತೆರಳಿದ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಹೆಬ್ಬಾಲೆ ಗ್ರಾಮ ಪಂಚಾಯಿತಿ ವತಿಯಿಂದ ಚಿಕ್ಕಳ್ಳಿ ಬೀದಿಯಲ್ಲಿ ರಸ್ತೆ ಅಭಿವೃದ್ಧಿ ಪಡಿಸಲು ಕಿರಿದಾದ ರಸ್ತೆಯನ್ನು ಜೆಸಿಬಿ ಮೂಲಕ ಅಗಲೀಕರಣಗೊಳಿಸುತ್ತಿದ್ದ ಸಂದರ್ಭ ಇಂದು ಮೂರ್ನಾಲ್ಕು ಹಗೇವುಗಳು ಪತ್ತೆಯಾಗಿವೆ. ಚನ್ನಣ್ಣ ಎಂಬುವರ ಮನೆಯ ಮುಂದೆ 10 ರಿಂದ 15 ಅಡಿ ಆಳದ ಹಗೇವು ಪತ್ತೆಯಾಗಿದೆ. ಈ ಹಗೇವು ಒಳಭಾಗದಲ್ಲಿ ಸಗಣಿಯಿಂದ ಸಾರಿಸಿದ್ದು, ಗುಂಡಿಯ ಒಳಗೆ ಸುತ್ತಲು ಕಲ್ಲುಗಳನ್ನು ಕಟ್ಟಿದ್ದು, ಗುಂಡಿಯ ಮೇಲೆ ಚಪ್ಪಡಿ ಕಲ್ಲು ಇದೆ. ಒಂದು ಕಲ್ಲು ಆಕಸ್ಮಿಕವಾಗಿ ಗುಂಡಿಯೊಳಗೆ ಬಿದ್ದ ಪರಿಣಾಮ ಈ ಹಗೇವು ಕಾಣಸಿಕ್ಕಿವೆ. ಈ ಬೀದಿಯಲ್ಲಿ 4 ಹಗೇವು ಪತ್ತೆಯಾಗಿದ್ದು, ಒಂದು ಹಗೇವಿಗೆ ಮುನ್ನೆಚ್ಚರಿಕೆಯ ಕ್ರಮವಾಗಿ ಪಂಚಾಯಿತಿ ವತಿಯಿಂದ 1 ಟ್ರ್ಯಾಕ್ಟರ್ ಮಣ್ಣನ್ನು ಸುರಿದು ಮುಚ್ಚಲಾಗಿದೆ. ಇದೇ ರೀತಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂಡು ಬಂದ ಹಗೇವುಗಳನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಕೇಶ್ ಅವರು ವೀಕ್ಷಿಸಿ ಗುಂಡಿಗಳಿಗೆ ಮಣ್ಣು ತುಂಬಿಸಲು ಕ್ರಮಕೈಗೊಂಡಿದ್ದಾರೆ.

ಈ ವ್ಯಾಪ್ತಿಯಲ್ಲಿ 150 ವರ್ಷಗಳ ಹಿಂದೆ ವಾಸವಿದ್ದ ಜನರು ತಮ್ಮ ಜೀವನೋಪಾಯವಾಗಿ ಧಾನ್ಯ ಸಂಗ್ರಹಕ್ಕೆ ಮಾಡಿಕೊಂಡಂತಹ ಈ ಹಗೇವು ಇಂದು ನೋಡುಗರಿಗೆ ಬೃಹತ್ ಗುಂಡಿಗಳಾಗಿ ಕಾಣ ಸಿಗುತ್ತಿವೆ.

-ಕೆ.ಕೆ.ನಾಗರಾಜಶೆಟ್ಟಿ.