ಕೂಡಿಗೆ, ಮಾ. 28: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 2017-18ನೇ ಸಾಲಿನ ಎರಡನೇ ಸುತ್ತಿನ ವಾರ್ಡ್ ಸಭೆಯು ತಾ. 26 ರಂದು ಕೂಡ್ಲೂರಿನ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕೂಡ್ಲೂರು ವಾರ್ಡಿನ ಸದಸ್ಯ ಈರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಭಾಗವಹಿಸಿದ ಗ್ರಾಮಸ್ಥರು ತಮ್ಮ ವಾರ್ಡಿನ ಸಮಸ್ಯೆಗಳಾದ ಕುಡಿಯುವ ನೀರಿನ ಬಗ್ಗೆ ಸಭೆಗೆ ತಿಳಿಸಿ, ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕೆಂದು ಮನವಿ ಮಾಡಿದರು. 2018-19ನೇ ಸಾಲಿನ ಕಾಮಗಾರಿಯ ಕ್ರಿಯಾಯೋಜನೆಗೆ ಗ್ರಾಮಸ್ಥರ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ವಾರ್ಡಿನಲ್ಲಿ ನಡೆಯಬೇಕಾದ ಕಾಮಗಾರಿಗಳನ್ನು ಹಾಗೂ ಅಭಿವೃದ್ಧಿ ಯೋಜನೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿ, ವಾರ್ಡಿನ ಸದಸ್ಯರ ಮುಖೇನ ಗ್ರಾಮಸಭೆಯಲ್ಲಿ ಚರ್ಚಿಸಿ, ನೋಂದಣಿ ಪುಸ್ತಕದಲ್ಲಿ ನೋಂದಾಯಿಸುವ ಮೂಲಕ ತಾಲೂಕು ಮಟ್ಟದಿಂದ ಹಣ ಬಿಡುಗಡೆಗೊಳಿಸಿ ಹೆಚ್ಚಿನ ಕಾಮಗಾರಿಯನ್ನು ನಿರ್ವಹಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ಈ ಸಂದರ್ಭ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ, ಸದಸ್ಯರಾದ ಜಯಮ್ಮ, ಜ್ಯೋತಿ ಪ್ರಮೀಳ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯೆಷಾ ಇದ್ದರು.