ಶನಿವಾರಸಂತೆ, ಮಾ. 28: ಮುಳುಗಡೆ ಸಂತ್ರಸ್ತರೊಬ್ಬರಿಗೆ ಹೈಕೋರ್ಟ್ ಆದೇಶದಂತೆ ಮಂಜೂರಾಗಿದ್ದ ಜಾಗದಲ್ಲಿ ಸುಮಾರು ಮುನ್ನೂರು ಮಂದಿ ಅತಿಕ್ರಮಣ ಮಾಡಿ ನಿರ್ಮಿಸಿಕೊಂಡಿದ್ದ ಟೆಂಟ್ ತೆರವುಗೊಳಿಸಲು ಹಮ್ಮಿಕೊಂಡಿದ್ದ ಕಾರ್ಯಾಚರಣೆ ಮಹಿಳಾ ಪೊಲೀಸರ ಕೊರತೆಯಿಂದ ಮುಂದೂಡಲ್ಪಟ್ಟ ಘಟನೆ ಮಂಗಳವಾರ ನಡೆದಿದೆ.ಸಮೀಪದ ಒಡೆಯನಪುರ ಗ್ರಾಮದಲ್ಲಿ ಮುಳುಗಡೆ ಸಂತ್ರಸ್ತ ರಮೇಶ್ ಅವರಿಗೆ 1972ರಲ್ಲೇ ಸರ್ವೆ ನಂ. 124/1ರಲ್ಲಿ 4 ಎಕರೆ ಜಾಗ ಮಂಜೂರಾಗಿತ್ತು. 2017-18ರಲ್ಲಿ ಎ.ಡಿ.ಎಲ್.ಆರ್. ಸರ್ವೆ ಆಗಿದೆ. ಜಿಲ್ಲಾಧಿಕಾರಿಯವರ ಆದೇಶದನ್ವಯ ಆರ್.ಟಿ.ಸಿ. ಕೂಡ ದೊರೆತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಮರ ಕಡಿಯಲು ಆದೇಶಿಸಿದ್ದರು. ಈ ನಡುವೆ ಮೂರು ದಿನಗಳ ಹಿಂದೆ ಶನಿವಾರಸಂತೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಅನೇಕ ಮಂದಿ ಸ್ಥಳೀಯ ಜನಪ್ರತಿನಿಧಿಯೊಬ್ಬರ ಕುಮ್ಮಕ್ಕಿನಿಂದ ಸಂತ್ರಸ್ತರ ಜಾಗವನ್ನು ಅತಿಕ್ರಮಿಸಿ ಟೆಂಟ್ ಹಾಕಿ ಕುಳಿತರು. ಸಂತ್ರಸ್ತ ಪುನಃ ಜಿಲ್ಲಾಧಿಕಾರಿಯವರ ಮೊರೆ ಹೋದರು.

ಜಿಲ್ಲಾಧಿಕಾರಿಯವರ ಆದೇಶದಂತೆ ಮಂಗಳವಾರ ಸೋಮವಾರಪೇಟೆ ವೃತ್ತ ನಿರೀಕ್ಷಕ ನಂಜುಂಡೇಗೌಡ, ತಹಶೀಲ್ದಾರ್ ಶಶಿಧರ್, ಶನಿವಾರಸಂತೆ ಪಿ.ಎಸ್.ಐ. ಎನ್. ಆನಂದ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಮುಳುಗಡೆ ಸಂತ್ರಸ್ತರ ಜಾಗದಲ್ಲಿ ಹಾಕಲಾಗಿದ್ದ ಟೆಂಟ್‍ಗಳನ್ನು ತೆರವುಗೊಳಿಸಲು ಮುಂದಾದರು.

ಆದರೆ, ಮುಳುಗಡೆ ಜಾಗ ಅತಿಕ್ರಮಿಸಿದವರಲ್ಲಿ ಮಹಿಳೆಯರ ಸಂಖ್ಯೆ ಅಧಿಕವಿದ್ದು, ಠಾಣೆಯಲ್ಲಿ ಮಹಿಳಾ ಪೊಲೀಸರ ಸಂಖ್ಯೆ ಕಡಿಮೆ ಇರುವ ಕಾರಣ ಅಧಿಕಾರಿಗಳು ಜಾಗ ತೆರವು ಕಾರ್ಯಕ್ರಮ ರದ್ದುಗೊಳಿಸಿದರು. ಮುಂದೆ ಜಾಗ ತೆರವಿಗೆ ದಿನ ನಿಗದಿಗೊಳಿಸುವ ಭರವಸೆ ನೀಡಿದರು.