ಕುಶಾಲನಗರ, ಮಾ. 28: ಕುಶಾಲನಗರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಗುಂಡೂರಾವ್ ಬಡಾವಣೆಯಿಂದ ರೈತ ಸಹಕಾರ ಭವನ ತನಕ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶÀ ವ್ಯಕ್ತಪಡಿಸಿ ಕಾಮಗಾರಿಗೆ ತಡೆಯೊಡ್ಡಿದ ಘಟನೆ ನಡೆಯಿತು.
ಬೈಚನಹಳ್ಳಿಯ ಗುಂಡೂರಾವ್ ಬಡಾವಣೆಯಿಂದ ಜಾತ್ರೆ ಮೈದಾನ ಸಮೀಪ ಹಾದು ಹೋಗಿರುವ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಮೂಲಕ ವಿಸ್ತರಣೆ ಕಾಮಗಾರಿ ಕೈಗೊಳ್ಳಲಾಗಿದೆ. ಪ್ರಸ್ತುತ ಇರುವ ರಸ್ತೆಯನ್ನು ಮಧ್ಯಭಾಗದಿಂದ ವಿಸ್ತರಣೆ ಮಾಡದೆ ರಸ್ತೆಯ ಅಧಿಕೃತ ಮಾರ್ಗವನ್ನೇ ಬದಲಿಸಲಾಗುತ್ತಿದೆ ಎಂದು ಸ್ಥಳೀಯ ಯುವಕರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ರಾಜಕಾರಣಿಯೊಬ್ಬರು ಸರಕಾರಿ ಜಾಗವನ್ನು ಅತಿಕ್ರಮಿಸಿಕೊಂಡು ನಿರ್ಮಿಸಿಕೊಂಡಿರುವ ಮಳಿಗೆ ಹಾಗೂ ಅವರ ಸಂಬಂಧಿಕರ ನಿವಾಸಕ್ಕೆ ತೆರಳುವ ರಸ್ತೆಗೆ ಕಾಮಗಾರಿಯಿಂದ ಯಾವದೇ ರೀತಿಯ ತೊಡಕುಂಟಾಗದಂತೆ ರಸ್ತೆಯ ಮಾರ್ಗವನ್ನು ಒಂದು ಭಾಗಕ್ಕೆ ಬದಲಿಸಲಾಗುತ್ತಿದೆ ಎಂದು ಗ್ರಾಮದ ಪ್ರಮುಖರಾದ ಕೆ.ಎನ್.ಅಶೋಕ್ ಮತ್ತು ಶಿವಕುಮಾರ್ ಆರೋಪ ವ್ಯಕ್ತಪಡಿಸಿದ್ದಾರೆ. ಈಗಿರುವ ರಸ್ತೆ ಮಾರ್ಗದ ಅನ್ವಯ ಕಾಮಗಾರಿ ಕೈಗೊಂಡಲ್ಲಿ ರಸ್ತೆಯ ಒಂದು ಭಾಗದ 15ಕ್ಕೂ ಹೆಚ್ಚಿನ ಮನೆಗಳಿಗೆ ಹಾನಿ ಉಂಟಾಗಲಿದೆ. ಅಲ್ಲದೆ ವಿದ್ಯುತ್ ಕಂಬಗಳನ್ನು ಕೂಡ ವೈಜ್ಞಾನಿಕ ರೀತಿಯಲ್ಲಿ ಅಳವಡಿಸಿರುವದಾಗಿ ಸ್ಥಳೀಯರಾದ ಶಿವ, ಜಗದೀಶ್, ಚಂದನ್ ಆರೋಪಿಸಿದರು.
ಈ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ನಕ್ಷೆಯ ಅನ್ವಯ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಕೂಡಲೆ ಸರ್ವೆ ನಡೆಸಿ ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳಲಾಗುವದು ಎಂದರು.
ಈ ಸಂದರ್ಭ ಪಟ್ಟಣ ಪಂಚಾಯ್ತಿ ಸದಸ್ಯ ಪ್ರಮೋದ್ ಮುತ್ತಪ್ಪ, ಗ್ರಾಮಸ್ಥರು ಇದ್ದರು.