ಸಿದ್ದಾಪುರ, ಮಾ. 28: ಕೊಂಡಂಗೇರಿಯಲ್ಲಿ ಉರೂಸ್ ಆಚರಣೆ ಅಂಗವಾಗಿ ಗ್ರಾಮದಲ್ಲಿ ಅಳವಡಿಸಿದ್ದ ಬ್ಯಾನರ್‍ಗಳನ್ನು ಗ್ರಾ.ಪಂ. ಪಿ.ಡಿ.ಓ. ಹಾಗೂ ಸಿಬ್ಬಂದಿ ತೆರವುಗೊಳಿಸುವ ಸಂದರ್ಭ ಗುಂಪೊಂದು ಅಡ್ಡಿಪಡಿಸಿ ಗ್ರಾ.ಪಂ. ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ. ಪರಿಣಾಮ ಬಿಲ್‍ಕಲೆಕ್ಟರ್‍ವೊಬ್ಬರು ತಲೆಗೆ ಗಾಯಗೊಂಡು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಕೊಂಡಂಗೇರಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿ ಆದ ಹಿನ್ನೆಲೆಯಲ್ಲಿ ಕೊಂಡಂಗೇರಿ ಗ್ರಾಮದಲ್ಲಿ ಉರೂಸ್ ಆಚರಣೆ ಸಂಬಂಧಿಸಿ ಅಳವಡಿಸಿದ್ದ ಬ್ಯಾನರ್ ಅನ್ನು ತೆರವುಗೊಳಿಸಲೆಂದು ಹಾಲುಗುಂದ ಗ್ರಾ.ಪಂ. ಪಿ.ಡಿ.ಓ. ದೀಪ ಹಾಗೂ ಸಿಬ್ಬಂದಿ ತೆರಳಿ ಬ್ಯಾನರ್‍ಗಳನ್ನು ತೆರವುಗೊಳಿಸಲು ಮುಂದಾದರು. ಈ ಸಂದರ್ಭ ಅಲ್ಲಿನ ಸ್ಥಳೀಯ ನಿವಾಸಿಗಳು ಆಕ್ಷೇಪಣೆ ವ್ಯಕ್ತಪಡಿಸಿ ಪಿ.ಡಿ.ಓ. ಅವರನ್ನು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ಬಳಿಕ ಬ್ಯಾನರ್ ತೆರವುಗೊಳಿಸುವ ಸಂದರ್ಭ ಯಾರೋ ಕಿಡಿಗೇಡಿಗಳು ಹಾಲುಗುಂದ ಗ್ರಾ.ಪಂ.ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಿಲ್‍ಕಲೆಕ್ಟರ್ ಮಂಜುನಾಥ್ ಎಂಬವರ ಮೇಲೆ ಕಲ್ಲು ತೂರಾಟ ಮಾಡಿದ್ದು, ಮಂಜುನಾಥ್ ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿದೆ. ಗಾಯಾಳು ಮಂಜುನಾಥ್ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಘಟನೆಯಿಂದ ಕೊಂಡಂಗೇರಿಯಲ್ಲಿ ಬಿಗುವಿನ ವಾತಾವರಣ ಮೂಡಿದ ಹಿನ್ನೆಲೆಯಲ್ಲಿ ಸಿದ್ದಾಪುರ ಪೊಲೀಸರು ಸ್ಥಳಕ್ಕೆ ತೆರಳಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದಾರೆ. ವೀರಾಜಪೇಟೆಯ ತಹಶೀಲ್ದಾರ್ ಗೋವಿಂದರಾಜು ಕೊಂಡಂಗೇರಿಗೆ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲದೆ, ಹಾಲುಗುಂದ ಪಂಚಾಯಿತಿ ಕಚೇರಿಗೆ ತೆರಳಿ, ಪಿ.ಡಿ.ಓ. ಅವರೊಂದಿಗೆ ಚರ್ಚಿಸಿದರು. ಈ ಸಂದರ್ಭ ‘ಶಕ್ತಿ’ಯೊಂದಿಗೆ ಮಾತನಾಡಿದ ತಹಶೀಲ್ದಾರ್ ಚುನಾವಣಾ ಆಯೋಗದ ಆದೇಶದಂತೆ ಪಿ.ಡಿ.ಓ. ಹಾಗೂ ಸಿಬ್ಬಂದಿ ಬ್ಯಾನರ್ ತೆರವುಗೊಳಿಸಿದ್ದು, ಧಾರ್ಮಿಕ ಆಚರಣೆ ಸಂಬಂಧ ಅಳವಡಿಸಿದ ಬ್ಯಾನರ್‍ಗೆ ಅನುಮತಿ ಪಡೆದ ಬಳಿಕ ಅಳವಡಿಸಲು ಅವಕಾಶ ನೀಡಲಾಗುವದೆಂದರು. ಗ್ರಾ.ಪಂ. ಸಿಬ್ಬಂದಿಯ ವಿರುದ್ಧ ಹಲ್ಲೆ ನಡೆಸಿರುವ ಬಗ್ಗೆ ಸಂಬಂಧಪಟ್ಟ ಮೇಲಧಿಕಾರಿಗಳೊಂದಿಗೆ ಚರ್ಚಿಸಿ, ಕ್ರಮಕ್ಕೆ ಮುಂದಾಗುವದಾಗಿ ಮಾಹಿತಿ ನೀಡಿದರು.

ಹಲ್ಲೆ ಖಂಡನೆ

ಚುನಾವಣಾ ಆಯೋಗದ ಆದೇಶದಂತೆ ಪಿ.ಡಿ.ಓ. ಹಾಗೂ ಗ್ರಾ.ಪಂ. ಸಿಬ್ಬಂದಿ ಕೊಂಡಂಗೇರಿಯಲ್ಲಿ ಅಳವಡಿಸಿದ ಬ್ಯಾನರ್ ಅನ್ನು ತೆರವುಗೊಳಿಸಿದ್ದಾರೆ. ಆದರೆ ಕೆಲವರು ಗ್ರಾ.ಪಂ. ಸಿಬ್ಬಂದಿ ಮಂಜುನಾಥ್ ಮೇಲೆ ಕಲ್ಲು ತೂರಾಟ ಮಾಡಿರುವದು ಖಂಡನೀಯ ಎಂದು ಗ್ರಾ.ಪಂ. ನೌಕರರ ಸಂಘದ ಅಧ್ಯಕ್ಷ ಪಿ.ಆರ್. ಭರತ್ ತಿಳಿಸಿದ್ದು, ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಪಿಡಿಓ ವಿರುದ್ಧ ಆಕ್ಷೇಪ

ಪಿಡಿಓ ದೀಪ ಅವರು ಏಕಾಏಕಿ ಉರೂಸ್ ಬ್ಯಾನರ್ ತೆರವುಗೊಳಿಸಿರುವ ಕ್ರಮ ಖಂಡನೀಯ ಎಂದು ಕೊಂಡಂಗೇರಿಯ ಗ್ರಾಮಸ್ಥರು ಪಿಡಿಓ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಮೇಲಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅವರ ವಿರುದ್ಧ ಸೂಕ್ತ ರೀತಿಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈತನ್ಮಧ್ಯೆ ಪಿಡಿಓ ಕ್ಷಮೆ ಕೋರಿದ ಘಟನೆಯೂ ನಡೆಯಿತು.