ಒಡೆಯನಪುರ, ಮಾ. 28: ನಿಡ್ತ ಗ್ರಾ.ಪಂ.ಗೆ ಸೇರಿದ ಒಡೆಯನಪುರ ಗ್ರಾಮದ ನೆಡುತೋಪು ಜಾಗದಲ್ಲಿ ವಸತಿ ರಹಿತರಿಗೆ ಮನೆ ಕಟ್ಟಿಕೊಳ್ಳಲು ಕಂದಾಯ ಇಲಾಖೆ ಅನುಮತಿ ನೀಡುವಂತೆ ಒತ್ತಾಯಿಸಿ ನೂರಾರು ವಸತಿ ರಹಿತ ಫಲಾನುಭವಿಗಳು ಒಡೆಯನಪುರ ಗ್ರಾಮದ ನೆಡುತೋಪು ಜಾಗದಲ್ಲಿ ಪ್ರತಿಭಟನೆ ನಡೆಸಿದರು. ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಪ್ರತಿಭಟನೆ ಸ್ಥಳದಲ್ಲಿ ಮುಂಜಾಗೃತವಾಗಿ ಪೊಲೀಸ್ ಬಿಗಿಭದ್ರತೆಯನ್ನು ಏರ್ಪಡಿಸಲಾಗಿತ್ತು.

ಪ್ರತಿಭಟನೆ ಮಾಡುತ್ತಿರುವ ಮಾಹಿತಿ ಕಂದಾಯ ಮತ್ತು ಪೊಲೀಸ್ ಇಲಾಖೆಗೆ ತಲಪಿದ ಕೂಡಲೇ ಸ್ಥಳಕ್ಕೆ ಶನಿವಾರಸಂತೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಚುನಾವಣೆ ಮುಗಿದ ನಂತರ ಪ್ರತಿಭಟನೆ ನಡೆಸಿ. ನೀತಿ ಸಂಹಿತೆ ಸಂದರ್ಭ ಪ್ರತಿಭಟನೆ ನಡೆಸಿದರೆ ನಿಮ್ಮ ಮೇಲೆ ಕಾನೂನು ಕ್ರಮ ತೆಗೆದು ಕೊಳ್ಳಲಾಗುವದೆಂದು ಎಚ್ಚರಿಸಿದ್ದರು. ಆದರೂ ಸಹ ಪ್ರತಿಭಟನಾಕಾರರು ಪ್ರತಿಭಟನೆ ಮುಂದುವರೆಸಿದರು. ಸ್ಥಳಕ್ಕೆ ಸೋಮವಾರಪೇಟೆ ತಹಶೀಲ್ದಾರ್ ಶಶಿಧರ್, ಸಿಐ ನಂಜುಂಡೇಗೌಡ ಆಗಮಿಸಿದ್ದರು. ಆದರೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪ್ರತಿಭಟನಾಕಾರರಿಂದ ಪ್ರತಿಭಟನೆ ಕುರಿತು ಯಾವದೇ ಮಾಹಿತಿ ಕೇಳದೆ ವಾಪಾಸ್ಸಾದರು. ಸ್ವಲ್ಪ ಸಮಯದ ನಂತರ ಪ್ರತಿಭಟನಾಕಾರರು ಸ್ವಯಂ ಪ್ರೇರಿತರಾಗಿ ಪ್ರತಿಭಟನೆ ಹಿಂತೆಗೆದುಕೊಂಡರು.

ಪ್ರತಿಭಟನೆಯಲ್ಲಿ ಶಾಹಿದ್, ರಹಿಮತ್, ಸರೋಜ, ಅಬ್ಬಾಸ್, ದೀಪಕ್, ಮಂಜುನಾಥ್, ವಸಂತ್ ಕುಮಾರ್, ರಹಮತ್ ಜಾನ್ ಮುಂತಾದವರಿದ್ದರು.