ಕೊಡ್ಲಿಪೇಟೆ: ಕೊಡ್ಲಿಪೇಟೆ ಹೋಬಳಿಯ ದೊಡ್ಡಕೊಡ್ಲಿ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ದೇವಿರಮ್ಮ ದೇವಿಯ ವಾರ್ಷಿಕ ಸುಗ್ಗಿ ಮಹೋತ್ಸವ ಶ್ರದ್ಧಾಭಕ್ತಿಯೊಂದಿಗೆ ನಡೆಯಿತು.
ಪವಿತ್ರ ಹೇಮಾವತಿ ನದಿಯಲ್ಲಿ ಶ್ರೀ ದೇವಿರಮ್ಮ ದೇವರ ವಿಗ್ರಹಗಳಿಗೆ ಗಂಗೆಸ್ನಾನ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಅಡ್ಡಪಲ್ಲಕ್ಕಿ ಮಂಟಪದಲ್ಲಿ ದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂರ್ಣಕುಂಭ ಕಲಶದೊಂದಿಗೆ ಊರಿನ ಪ್ರಮುಖ ಬೀದಿಯಲ್ಲಿ ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
ಬಳಿಕ ಡೊಡ್ಡಕೊಡ್ಲಿ ಗ್ರಾಮದ ಸುಗ್ಗಿಕಟ್ಟೆಯಲ್ಲಿ ದೇವಿರಮ್ಮ ದೇವಿಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಪುರಸ್ಕಾರ ನೆರವೇರಿಸಲಾಯಿತು. ಉತ್ಸವದ ಅಂಗವಾಗಿ ವಿವಿಧ ಪುಷ್ಪಗಳಿಂದ ದೇವರ ಮೂರ್ತಿಗಳನ್ನು ಶೃಂಗರಿಸಲಾಗಿತ್ತು. ರಾತ್ರಿ ದೇವಿಗೆ ಎಡೆ ಕಾರ್ಯಗಳು ಮುಗಿದ ನಂತರ ವಿದ್ಯುತ್ ದೀಪಗಳಿಂದ ಅಲಂಕೃತವಾದ ವಿಶಾಲ ಸುಗ್ಗಿಕಟ್ಟೆಯಲ್ಲಿ ಇಡೀ ರಾತ್ರಿ ಸುಗ್ಗಿ ಉತ್ಸವ ನಡೆದು, ಹರಕೆ ಹೊತ್ತ ಭಕ್ತರು ಸುಗ್ಗಿಕಟ್ಟೆ ಮುಂಭಾಗದಲ್ಲಿ ಸ್ಥಾಪಿಸಿದ್ದ ಅಗ್ನಿಕುಂಡವನ್ನು ತುಳಿದು ದೇವಿ ದರ್ಶನ ಪಡೆದು ಪುನೀತರಾದರು. ರಾತ್ರಿ ಇಡೀ ನಡೆದ ಸುಗ್ಗಿ ಉತ್ಸವದಲ್ಲಿ ಮಲೆನಾಡಿನ ಸುಗ್ಗಿಕುಣಿತ, ಜಾಗಟೆ, ತಮಟೆವಾದ್ಯ, ಬಿಲ್ಲುಕುದುರೆ, ಮಲ್ಲು ಬೆಳಗುವ ಕುಣಿತ ಮುಂತಾದ ಜಾನಪದ ಕಲಾತಂಡಗಳ ಪ್ರದರ್ಶನ ಉತ್ಸವಕ್ಕೆ ಮೆರಗು ನೀಡಿತು.
ದೇವಸ್ಥಾನದ ಸಮಿತಿ ಅಧ್ಯಕ್ಷ ಎಸ್.ಡಿ. ತಮ್ಮಯ್ಯ ಮತ್ತು ಪ್ರಧಾನ ಅರ್ಚಕ ಡಿ.ಎಸ್. ದರ್ಶನ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಮುಂಜಾನೆ ಮಹಾಮಂಗಳಾರತಿ ಬಳಿಕ ಭಕ್ತರಿಗೆ ತೀರ್ಥಪ್ರಸಾದ ವಿನಿಯೋಗಿಸಲಾಯಿತು. ದಾನಿಗಳಾದ ನಿವೃತ್ತ ಸೈನಿಕರಾದ ದೇವರಾಜ್ ಮತ್ತು ಮನು ನೆರೆದಿದ್ದ ಭಕ್ತ ಸಮೂಹಕ್ಕೆ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಿದ್ದರು. ಈ ಉತ್ಸವಕ್ಕೆ ದೊಡ್ಡಕೊಡ್ಲಿ, ಹೊಸ ಮುನ್ಸಿಪಾಲಿಟಿ, ಕಲ್ಲಳ್ಳಿ, ಕಲ್ಲಾರೆ, ಶಾಂತಪುರ, ಎಣ್ಣೆಗದ್ದೆ, ಹಂಪಾಪುರ, ಕೆಲಕೊಡ್ಲಿ, ಶಿವಪುರ, ನವಗ್ರಾಮ ಮುಂತಾದ ಗ್ರಾಮಗಳ ಸಾವಿರಾರು ಜನ ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದು ಪುನೀತರಾದರು. ಪ್ರತಿ ವರ್ಷ ನಡೆಯುವ ಶ್ರೀ ದೇವಿರಮ್ಮ ಸುಗ್ಗಿ ಉತ್ಸವಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಸುಗ್ಗಿ ಉತ್ಸವದ ಅಂಗವಾಗಿ ದೇವಸ್ಥಾನ ಮತ್ತು ಗ್ರಾಮವನ್ನು ಹಸಿರು ತಳಿರು ತೋರಣ ಹಾಗೂ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಸುಗ್ಗಿ ಉತ್ಸವದಲ್ಲಿ ಶನಿವಾರಸಂತೆ ಠಾಣಾಧಿಕಾರಿ ಆನಂದ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಕೊಳಕೇರಿಯಲ್ಲಿ ಮಸೀದಿ ಶಿಲಾನ್ಯಾಸ
ಮಡಿಕೇರಿ: ಇಲ್ಲಿಗೆ ಸಮೀಪದ ಕೊಳಕೇರಿ ಜುಮಾ ಮಸೀದಿಯ ಪುನರ್ ನಿರ್ಮಾಣ ಕಾರ್ಯಕ್ಕೆ ತಾ. 29 ರಂದು (ಇಂದು) ಸಂಜೆ 4 ಗಂಟೆಗೆ ಧರ್ಮ ಗುರು ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರ ಅವರು ಶಿಲಾನ್ಯಾಸ ನೆರವೇರಿಸುವರು.
‘ಅಸ್ಮಾವುಲ್‍ಹುಸ್ನಾ’
ಮಡಿಕೇರಿ: ಇಲ್ಲಿನ ಎಂ.ಎಂ. ಮಸೀದಿಯಲ್ಲಿ ಮಾಸಿಕ ಅಸ್ಮಾವುಲ್ ಹುಸ್ನಾ ರಾತೀಬ್ ತಾ. 29 ರಂದು (ಇಂದು) ರಾತ್ರಿ ನಡೆಯಲಿದೆ ಎಂದು ಮಸೀದಿಯ ಧರ್ಮಗುರು ಅಬ್ದುಲ್ ಹಮೀದ್ ಮದನಿ ತಿಳಿಸಿದ್ದಾರೆ.
ಪ್ರತಿಷ್ಠಾಪನಾ ಮಹೋತ್ಸವ
ಸುಂಟಿಕೊಪ್ಪ: ಇಲ್ಲಿನ ಮಾದಾಪುರ ರಸ್ತೆಯಲ್ಲಿರುವ ಶ್ರೀ ವೃಕ್ಷೋದ್ಭವ ಶಕ್ತಿ ಮಹಾ ಗಣಪತಿ ದೇವಸ್ಥಾನದಲ್ಲಿ ವಿವಿಧ ದೇವರುಗಳ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ವಿವಿಧ ದೈವಿಕ ಕೈಂಕರ್ಯಗಳು ಜರುಗಲಿವೆ.
ತಾ. 29 ರ ಸಂಜೆಯಿಂದ ಕಾರ್ಯಕ್ರಮ ಆರಂಭವಾಗಲಿದ್ದು, ತಾ. 30 ರಂದು ಬೆಳಿಗ್ಗೆ 6 ಗಂಟೆಯಿಂದ ವಿವಿಧ ದೇವತಾ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಪ್ರಸಾದ ವಿತರಣೆಯೊಂದಿಗೆ ಅನ್ನಸಂತರ್ಪಣೆ ನಡೆಯಲಿದೆ.