ಮೂರ್ನಾಡು: ಇಲ್ಲಿಗೆ ಸಮೀಪದ ಕಿಗ್ಗಾಲು ಗ್ರಾಮದ ಶ್ರೀ ಚಾಮುಂಡೇಶ್ವರಿ ದೊಡ್ಡಮುಡಿ ತೆರೆ ಮಹೋತ್ಸವ ಏ. 2 ರಿಂದ 4 ರವರೆಗೆ ನಡೆಯಲಿದೆ. ಏ. 2 ರಂದು ಕೊಟ್ಟಿ ಹಾಡುವದು, ಏ. 3 ರಂದು 3 ಗಂಟೆಗೆ ತಕ್ಕರ ಮನೆಯಿಂದ ಭಂಡಾರ ಅಂಬಲಕ್ಕೆ ತಂದು ತದನಂತರ ದೇವರ ದರ್ಶನ, ನಂತರ ಭಂಡಾರ ತೆಗೆದುಕೊಂಡು ಎತ್ತು ಹೋರಾಟವಾಗಿ ಬನಕ್ಕೆ ಹೋಗಿ ಅಲ್ಲಿ ದೇವತಾ ಕಾರ್ಯಗಳು ನಡೆಯಲಿವೆ. ಕುಟ್ಟಿಚಾತ, ತೋತ ತೆರೆ, ತೆಂಗಿನಕಾಯಿಗೆ ಗುಂಡು ಹೊಡೆಯುವದು, ಭಂಡಾರವನ್ನು ಅಂಬಲಕ್ಕೆ ತಂದು ಅಂದು ರಾತ್ರಿ 9 ಗಂಟೆಗೆ ಮೇಲೇರಿಗೆ ಬೆಂಕಿ ಕೊಡುವದು, ಇತರ ದೈವತಾ ಕಾರ್ಯಗಳು ನಡೆಯಲಿವೆ. ತಾ. 4 ರಂದು ಬೆಳಿಗ್ಗೆ 5 ಗಂಟೆಗೆ ಶ್ರೀ ವಿಷ್ಣುಮೂರ್ತಿ ಮೇಲೇರಿ ನಡೆಯಲಿದೆ. ಮಧ್ಯಾಹ್ನ 11 ಗಂಟೆಗೆ ಶ್ರೀ ಚಾಮುಂಡೇಶ್ವರಿ ದೊಡ್ಡ ಮುಡಿ ತೆರೆ ನಡೆಯಲಿದೆ ಎಂದು ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.

ದೇಗುಲ ಉದ್ಘಾಟನೆ

ಮಡಿಕೇರಿ: ಇತ್ತೀಚೆಗೆ ಜೀರ್ಣೋದ್ಧಾರ ಮಾಡಿದ ಪೂಜೆಕಲ್ಲು ಕುಟ್ಟ ಕೋಗಿಲವಾಡಿ ಶ್ರೀ ದೊಡ್ಡ ಬಸವೇಶ್ವರ ದೇವಾಲಯದ ಉದ್ಘಾಟನೆಯನ್ನು ಏ. 9 ರಂದು ಬೆಳಿಗ್ಗೆ 10.30 ಗಂಟೆಗೆ ಅರಮೇರಿ ಕಳಂಚೇರಿ ಮಠಾಧ್ಯಕ್ಷರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೆರವೇರಿಸುವರು. ಪೂಜಾ ವಿಧಿವಿಧಾನಗಳನ್ನು ಎಸ್. ಸರ್ಪಭೂಷಣ ಸ್ವಾಮಿ ನಡೆಸಲಿದ್ದಾರೆಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ಏ. 2 ರಂದು ವಾರ್ಷಿಕ ಪೂಜೆ

ಸೋಮವಾರಪೇಟೆ: ಸಮೀಪದ ಹುದುಗೂರು ಗ್ರಾಮದ ಶ್ರೀ ಉಮಾ ಮಹೇಶ್ವರ ದೇವಾಲಯದಲ್ಲಿ ಏ. 2 ರಂದು ವಾರ್ಷಿಕ ಪೂಜಾ ಕಾರ್ಯಕ್ರಮ ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಟಿ.ಎಂ. ಚಾಮಿ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಗಣಪತಿ ಹೋಮ, ಶ್ರೀ ಮೃತ್ಯುಂಜಯ ಹೋಮ, ಪ್ರಧಾನ ಮತ್ತು ಉಪ ದೇವತೆಗಳಿಗೆ ವಿಶೇಷ ಅಭಿಷೇಕ, ಅರ್ಚನೆ ಮತ್ತಿತರ ಪೂಜೆಗಳು ನಡೆಯಲಿವೆ. ಮಧ್ಯಾಹ್ನ ಮಹಾ ಮಂಗಳಾರತಿ ಹಾಗೂ ಅನ್ನಸಂತರ್ಪಣೆ, ಸಂಜೆ ದೀಪಾಲಂಕಾರ ವಿಶೇಷ ಪೂಜೆ, ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.