ಮಡಿಕೇರಿ, ಮಾ. 28: ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಹಮ್ಮಿಕೊಳ್ಳಲಾದ ಶೈಕ್ಷಣಿಕ ಚಟುವಟಿಕೆಗಳ ವಿವರಗಳು ಇಂತಿವೆ.
ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಮೂರ್ನಾಡು: ಪಾರಾಣೆ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭ ನಡೆಯಿತು.
ಶಾಲಾ ಸಭಾಂಗಣದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪೆಬ್ಬಾಟಂಡ ಪೆಮ್ಮಯ್ಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ರವೇಶ ಪತ್ರ ವಿತರಿಸಿ ಮಾತನಾಡಿದರು.
ಈ ಸಂದರ್ಭ ಹತ್ತನೇ ತರಗತಿ ವಿದ್ಯಾರ್ಥಿಗಳು ಶಾಲೆಗೆ ನೆನಪಿನ ಕಾಣಿಕೆಯನ್ನು ಹಸ್ತಾಂತರಿಸಿದರು. ಶಾಲಾ ಮುಖ್ಯ ಶಿಕ್ಷಕಿ ರಜಿನಿ, ಆಡಳಿತ ಮಂಡಳಿ ಕಾರ್ಯದರ್ಶಿ ಕುಶಾಲಪ್ಪ, ಆಡಳಿತ ಮಂಡಳಿ ಸದಸ್ಯರು ಹಾಗೂ ಶಾಲಾ ಶಿಕ್ಷಕ ವೃಂದದವರು ಹಾಜರಿದ್ದರು.
ವೃತ್ತಿ ಘನತೆ ಕಾಯ್ದುಕೊಳ್ಳಲು ಕರೆ
ಕೂಡಿಗೆ: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಅಳುವಾರದಲ್ಲಿನ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ಅಧ್ಯಯನ ವಿಭಾಗದ ವತಿಯಿಂದ ವಿಶ್ವ ಸಮಾಜಕಾರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಪಿರಿಯಾಪಟ್ಟಣದ ಚೈತನ್ಯ ಚಾರಿಟೇಬಲ್ ಟ್ರಸ್ಟ್‍ನ ಸಂಯೋಜಕಿ ಸಿಸ್ಟರ್ ಸೋನಿಯಾ ಪೀಟರ್ ಉದ್ಘಾಟಿಸಿ ಮಾತನಾಡಿ, ಸಮಾಜ ಕಾರ್ಯವು ಮಾನವನ ಸಾಮಾಜಿಕ ಆರೋಗ್ಯದ ರಕ್ಷಣೆಗೆ ಮತ್ತು ಬೆಳವಣಿಗೆಗೆ ಅತ್ಯಮೂಲ್ಯವಾದ ಕೊಡುಗೆಯನ್ನು ನೀಡಿದೆ. ಸಮಾಜಕಾರ್ಯ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವಾಗ ಮೌಲ್ಯಗಳು ಹಾಗೂ ವೃತ್ತಿ ಘನತೆಯು ಕಾಯ್ದುಕೊಳ್ಳುವಂತಹ ತತ್ವಗಳು ಮಾನವನ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.
ಈ ಸಂದರ್ಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜಕಾರ್ಯ ಅಧ್ಯಯನ ವಿಭಾಗದ ಉಪನ್ಯಾಸಕ ಎಸ್.ಎಂ. ನಟರಾಜ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮಾಜಕಾರ್ಯ ಅಧ್ಯಯನ ವಿಭಾಗದ ಉಪನ್ಯಾಸಕರುಗಳಾದ ಕೆ.ಜೆ. ರಾಬಿನ್, ಲೋಕೇಶ್ ಭರಣಿ, ಎಂ.ಎನ್.ಕೆ. ಹರಿಣಾಕ್ಷಿ, ವಿವಿಧ ವಿಭಾಗದ ಉಪನ್ಯಾಸಕರು, ಆಡಳಿತ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಕೆ.ಪಿ. ಚಂದನ್, ಅಮುದ, ಆರ್. ಸಹನ ಹಾಗೂ ಎಸ್. ಸಚಿನ್ ನಿರ್ವಹಿಸಿದರು.
ಉತ್ತಮ ವಿದ್ಯಾರ್ಥಿ ಪ್ರಶಸ್ತಿ
ಮಡಿಕೇರಿ: ಮಡಿಕೇರಿಯ ಫೀ.ಮಾ. ಕಾರ್ಯಪ್ಪ ಕಾಲೇಜಿನ ಅಂತಿಮ ಬಿ.ಕಾಂ. (ಸಿ.ಎ) ವಿದ್ಯಾರ್ಥಿನಿ ಎ.ಪಿ. ವಿಲ್ಮ ಈ ಬಾರಿ ಶೈಕ್ಷಣಿಕ ಹಾಗೂ ಇತರ ಚಟುವಟಿಕೆಗಳ ಆಧಾರ ‘ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್’ ಪ್ರಶಸ್ತಿಗೆ ಭಾಜನಳಾಗಿದ್ದಾಳೆ.
ಇತ್ತೀಚೆಗೆ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಮಂಗಳೂರು ವಿ.ವಿ.ಯ ರಿಜಿಸ್ಟ್ರಾರ್ ನಾಗೇಂದ್ರ ಪ್ರಕಾಶ್ ಪ್ರಶಸ್ತಿ ವಿತರಿಸಿದರು. ಈಕೆ ಮಡಿಕೇರಿಯ ಅಜ್ಜೇಟಿರ ಶಂಭು ಪಳಂಗಪ್ಪ ಹಾಗೂ ರಾಣಿ ದಂಪತಿಯ ಪುತ್ರಿ.
ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಮಡಿಕೇರಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಡಿಕೇರಿಯ ರೆಡ್ ರಿಬ್ಬನ್ ಕ್ಲಬ್, ರೆಡ್ ಕ್ರಾಸ್ ಘಟಕ ಮತ್ತು ರಾಷ್ಟೀಯ ಸೇವಾ ಯೋಜನಾ ಘಟಕದ ವತಿಯಿಂದ ಕಾಲೇಜಿನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ರಕ್ತ ದಾನಿಗಳ ನೋಂದಣಿ ಶಿಬಿರ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೊಡಗು ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಅಧಿಕಾರಿ ಡಾ. ಕರುಂಬಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸ್ವಯಂ ಪ್ರೇರಿತ ರಕ್ತದಾನ ಬಹಳ ಅಮೂಲ್ಯವಾದ ಸೇವೆ. ರಕ್ತದಾನ ಮಾಡುವದರಿಂದ ನಾವು ಇನ್ನೊಂದು ಜೀವವನ್ನು ಉಳಿಸಬಹುದು.
ರಕ್ತವನ್ನು ಕೃತಕವಾಗಿ ತಯಾರಿಸಲು ಅಸಾಧ್ಯ. ಹಾಗಾಗಿ ರಕ್ತದಾನ ಮಹಾದಾನ. ರಕ್ತದಾನ ಮಾಡುವದರಿಂದ ಏನೇನು ಪ್ರಯೋಜನವಿದೆ, ಯಾರು ರಕ್ತವನ್ನು ದಾನ ಮಾಡಬಹುದು ಎಂಬದರ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಪ್ರೊ. ಚಿತ್ರಾ ವೈ ವಹಿಸಿಕೊಂಡು ರಕ್ತದಾನ ಮಹಾದಾನ. ಎಲ್ಲರೂ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬಂದಿರುವದು ಸಂತೋಷದ ವಿಷಯ. ರಕ್ತದಾನದಿಂದ ಸಂಕಷ್ಟದಲ್ಲಿರುವವರ ಜೀವವನ್ನು ಉಳಿಸಬಹುದು ಎಂದರು. ಮಡಿಕೇರಿಯ ರಕ್ತದಾನಿ ಮತ್ತು ಸಮಾಜ ಸೇವಕ ಹಿದಾಯತುಲ್ಲಾ ಉಪಸ್ಥಿತರಿದ್ದರು. ಶಿಬಿರದಲ್ಲಿ ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗದವರು ಮತ್ತು ಮೂವತ್ತಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
ಕಾಲೇಜಿನ ಪ್ರಾಧ್ಯಾಪಕ ಡಾ. ಕೆ.ಸಿ. ದಯಾನಂದ ಸ್ವಾಗತಿಸಿದರು. ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ. ಬಿ.ಆರ್. ಶಶಿಧರ್ ವಂದಿಸಿದರು. ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಪ್ರೊ. ಕುಸುಮ ಕಾರ್ಯಕ್ರಮ ನಿರೂಪಿಸಿದರು.