ಸೇನೆಯಲ್ಲಿ 274 ಪೈಲಟ್ ಹುದ್ದೆಗಳು ಖಾಲಿ ನವದೆಹಲಿ, ಮಾ. 28: ನೌಕಪಡೆ ಹಾಗೂ ಸೇನೆಯಲ್ಲಿ 274 ಪೈಲಟ್ ಹುದ್ದೆಗಳು ಖಾಲಿ ಇರುವದಾಗಿ ಕೇಂದ್ರಸರ್ಕಾರ ಲೋಕಸಭೆಗೆ ಇಂದು ತಿಳಿಸಿದೆ. ಸೇನೆಯಲ್ಲಿ 794 ಪೈಲಟ್ ಹುದ್ದೆಗಳಿಗಾಗಿ ಮಂಜೂರು ಮಾಡಲಾಗಿದ್ದು, 192 ಹುದ್ದೆಗಳು ಖಾಲಿ ಇವೆ. ನೌಕಾಪಡೆಯಲ್ಲಿ 735 ಪೈಲಟ್ ಹುದ್ದೆಗಳು ಮಂಜೂರಾಗಿದ್ದು, 82 ಹುದ್ದೆಗಳಿಗೆ ಖಾಲಿ ಇವೆ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಸುಭಾಶ್ ಭಾಮ್ರೆ ಲಿಖಿತ ಉತ್ತರದಲ್ಲಿ ಪ್ರತಿಕ್ರಿಯಿಸಿದ್ದಾರೆ. ಭಾರತೀಯ ವಾಯುಪಡೆಯಲ್ಲಿ ಪೈಲಟ್‍ಗಳ ಕನಿಷ್ಟ ಕೊರತೆ ಎದುರಾಗಿದೆ. ಆದಾಗ್ಯೂ, ಪ್ರಸ್ತುತದಲ್ಲಿನ ಕಾರ್ಯಾಚರಣೆಗೆ ಅಗತ್ಯಕ್ಕನುಗುಣವಾಗಿ ವಾಯುಪಡೆ ಪೈಲಟ್ ಲಭ್ಯವಿರುವದಾಗಿ ಅವರು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತೀಯ ಸಾಗರೋತ್ತರ ವಲಯದ ವ್ಯಾಪ್ತಿ ವಿಸ್ತಾರಗೊಂಡಿದ್ದು, ಭೌಗೋಳಿಕ ಕಾರ್ಯತಂತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಡಲ ತೀರ ಪ್ರದೇಶದಲ್ಲಿ ನೌಕಾ ಸಿಬ್ಬಂದಿ ನಿಗಾವಹಿಸಿದ್ದಾರೆ. ಸಾಗರೋತ್ತರ ಪ್ರದೇಶಗಳಲ್ಲಿ ಭಾರತ ನೌಕಪಡೆ ಇನ್ನಿತರ ವಿದೇಶಗಳ ಸಹಕಾರದೊಂದಿಗೆ ಜಂಟಿಯಾಗಿ ಮೇಲ್ವಿಚಾರಣೆ ಮಾಡುತ್ತಿಲ್ಲ ಎಂದು ಸುಭಾಶ್ ಭಾಮ್ರೆ ಸ್ಪಷ್ಪಪಡಿಸಿದ್ದಾರೆ.

3 ಸಾವಿರ ಕೆ.ಜಿ. ತೂಕದ ಸ್ಫೋಟಕ ವಶ

ಕೋಝಿಕೋಡ್, ಮಾ. 28: ಕರ್ನಾಟಕದ ಹಾಸನದಿಂದ ಕೇರಳದ ಕೋಝಿಕೋಡ್ ಕಡೆಗೆ ಹೋಗುತ್ತಿದ್ದ ಲಾರಿಯೊಂದನ್ನು ವಶಕ್ಕೆ ತೆಗೆದುಕೊಂಡಿರುವ ಪೆÇಲೀಸರು, ಗಿಲಾಟಿನ್ ಕಡ್ಡಿ, ಪ್ಯೂಸ್ ವೈರ್ ಸೇರಿದಂತೆ ಸುಮಾರು 3 ಸಾವಿರ ಕೆ.ಜಿ. ತೂಕದ ಭಾರೀ ಪ್ರಮಾಣದ ಸ್ಫೋಟಕಗಳನ್ನು ಇಂದು ಮುಂಜಾನೆ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ದೇಬೆಶ್ ಕುಮಾರ್ ಬೆಹೆರಾ ಅವರ ಸೂಚನೆ ಮೇರೆಗೆ ಕೇರಳದ ಮಲ್ಲಾಪುರಂ ಜಿಲ್ಲೆಯ ಮೊಂಗಮ್ ಬಳಿ ಕರ್ನಾಟಕ ನೋಂದಣಿಯ ಲಾರಿಯನ್ನು ಪೆÇಲೀಸರು ಶೋಧಿಸಿದಾಗ ಭಾರೀ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿವೆ. ಶೋಧ ವೇಳೆ 10 ಸಾವಿರ ಡಿಟೋನೇಟರ್, 3 ಸಾವಿರದ 750 ಕಿಲೋಗ್ರಾಮ್ ಗಿಲಾಟಿನ್ ಕಡ್ಡಿಗಳು ಹಾಗೂ 213 ಪ್ಯೂಸ್ ವೈರ್‍ಗಳನ್ನು ಪಟ್ಟಣಗಳಲ್ಲಿ ಇಟ್ಟಿರುವದು ಕಂಡುಬಂದಿದೆ. ಈ ಲಾರಿ ಕರ್ನಾಟಕದ ಹಾಸನದಿಂದ ಕೋಝಿಕೊಡು ಕಡೆಗೆ ತೆರಳುತ್ತಿತ್ತು ಎಂದು ಪೆÇಲೀಸರು ತಿಳಿಸಿದ್ದಾರೆ.

ಮ್ಯಾನ್ಮಾರ್ ಅಧ್ಯಕ್ಷರಾಗಿ ವಿನ್ ಮಿಂಟ್ ಆಯ್ಕೆ

ನೈಪಿತಾವ್, ಮಾ. 28: ಮ್ಯಾನ್ಮಾರ್ ನೂತನ ಅಧ್ಯಕ್ಷರಾಗಿ ಆಂಗ್ ಸಾನ್ ಸೂಕಿ ಅವರ ಆಪ್ತ ವಿನ್ ಮಿಂಟ್ ಅವರು ಆಯ್ಕೆಯಾಗಿದ್ದಾರೆ. ಇದರಿಂದಾಗಿ, ಉನ್ನತ ಮಟ್ಟದ ನಿರ್ಧಾರಗಳ ಮೇಲೆ ಹಿಡಿತ ಸಾಧಿಸಲು ಸೂಕಿ ಅವರಿಗೆ ಸಾಧ್ಯವಾಗಲಿದೆ. ವಿನ್ ಮಿಂಟ್ ಅವರು ಇದಕ್ಕೂ ಮುನ್ನ ಸ್ಪೀಕರ್ ಆಗಿದ್ದರು. ರೋಹಿಂಗ್ಯಾ ಮುಸ್ಲಿಂ ಸಮುದಾಯದವರ ಬಿಕ್ಕಟ್ಟು ಅಂತರರಾಷ್ಟ್ರೀಯ ಮಟ್ಟದಲ್ಲಿ ತಾರಕಕ್ಕೇರಿರುವಂತೆಯೇ, ಮ್ಯಾನ್ಮಾರ್ ಅಧ್ಯಕ್ಷರಾಗಿದ್ದ ಹಟಿನ್ ಕ್ಯಾವ್ ಕಳೆದ ವಾರ ದಿಢೀರನೆ ರಾಜೀನಾಮೆ ನೀಡಿದ್ದರಿಂದ ಅಧ್ಯಕ್ಷ ಸ್ಥಾನವು ತೆರವಾಗಿತ್ತು. ಸಂಸತ್ತಿನಲ್ಲಿ ಮೂರನೇ ಎರಡು ಭಾಗದಷ್ಟು ಮತ ಪಡೆಯುವ ಮೂಲಕ ವಿನ್ ಮಿಂಟ್ ಆಯ್ಕೆ ಆಗಿದ್ದಾರೆ. ಸೂಕಿ ವಿದೇಶಿಯೊಬ್ಬರನ್ನು ಮದುವೆಯಾಗಿದ್ದು, ಮಕ್ಕಳಿಬ್ಬರೂ ಬ್ರಿಟಿಷ್ ಪ್ರಜೆಗಳಾಗಿರುವ ಕಾರಣ, ಅಧ್ಯಕ್ಷ ಹುದ್ದೆಯಿಂದ ಸೇನಾ ಕರಡು ಸಂವಿಧಾನ ನಿಷೇಧಿಸಿತ್ತು. 2015ರ ಚುನಾವಣೆಯಲ್ಲಿ ಇವರ ನೇತೃತ್ವದ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷ ಬಹುಮತಗಳಿಸಿದ ಕಾರಣ, ಕೌನ್ಸೆಲರ್ ಆಗಿ ನೇಮಕಗೊಂಡರು. ಆದರೆ ಈ ಹುದ್ದೆಗೆ ಸಾಂವಿಧಾನಿಕ ಮಾನ್ಯತೆ ಇರಲಿಲ್ಲ. ಅವರ ಶಾಲಾ ಸ್ನೇಹಿತರೂ ಆಗಿರುವ ಹಟಿನ್ ಕ್ಯಾವ್, ಸೂಕಿಯವರ ಪ್ರತಿನಿಧಿಯಾಗಿ ಅಧ್ಯಕ್ಷ ಹುದ್ದೆಯಲ್ಲಿದ್ದರು.

ವಿಜಯ್ ಮಲ್ಯಗೆ 3 ನೇ ಮದುವೆ !

ಲಂಡನ್, ಮಾ. 28: ವಿಜಯ್ ಮಲ್ಯ ಮೂರನೇ ಮದುವೆ ತಯಾರಿಯಲ್ಲಿದ್ದಾರೆ. ವಿವಿಧ ಬ್ಯಾಂಕ್‍ಗಳಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ ಶೀಘ್ರದಲ್ಲಿಯೇ ಮಾಜಿ ಗಗನಸಖಿ, ಗೆಳತಿ ಪಿಂಕಿ ಲಾಲ್ವಾನಿ ಅವರನ್ನು ವಿವಾಹವಾಗಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಕಿಂಗ್ ಫಿಷರ್ ಏರ್‍ಲೈನ್ಸ್‍ನಲ್ಲಿ ಗಗನಸಖಿಯಾಗಿದ್ದ ಪಿಂಕಿ ಲಾಲ್ವಾನಿ ಜತೆ ಸಂಬಂಧ ಇರಿಸಿಕೊಂಡಿದ್ದ ಮಲ್ಯ ಅವರನ್ನು ತನ್ನ ಮೂರನೇ ಪತ್ನಿಯನ್ನಾಗಿ ಸ್ವೀಕರಿಸುವ ತಯಾರಿಯಲ್ಲಿದ್ದಾರೆ. ವಿಜಯ್ ಮಲ್ಯ ಇದಾಗಲೇ ಎರಡು ಬಾರಿ ವಿವಾಹವಾಗಿದ್ದಾರೆ. ಸಮೀರಾ ತಯ್ಯಬ್ಜೀ ಹಾಗೂ ರೇಖಾ ಮಲ್ಯ ಅವರ ಇಬ್ಬರು ಪತ್ನಿಯರು. 1993 ರಲ್ಲಿ ರೇಖಾ ಮಲ್ಯ ಅವರೊಡನೆ ವಿವಾಹವಾಗಿದ್ದ ವಿಜಯ್ ಮಲ್ಯ ಅವರಿಗೆ ಸಿದ್ದಾರ್ಥ್, ಲಿಯೆನ್ನಾ ಹಾಗೂ ತಾನ್ಯಾ ಸೇರಿ ಮೂರು ಮಕ್ಕಳಿದ್ದಾರೆ.

ಪುತ್ರ ಶೋಕ : ವೈದ್ಯ ದಂಪತಿ ಆತ್ಮಹತ್ಯೆ

ಮೈಸೂರು, ಮಾ. 28: ವೈದ್ಯ ದಂಪತಿ ಒಂದೇ ಸೀರೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಸರಸ್ವತಿಪುಂ 14ನೇ ಮೇನ್‍ನಲ್ಲಿ ನಡೆದಿದೆ. ಡಾ. ಸತೀಶ್ ಹಾಗೂ ಡಾ. ವೀಣಾ ಆತ್ಮಹತ್ಯೆಗೆ ಶರಣಾದ ದಂಪತಿ. ಕುಕ್ಕರಹಳ್ಳಿ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇವರ ಮಗ ಮೃತಪಟ್ಟಿದ್ದ. ಏಕೈಕ ಮಗನ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ಇವರು ಇಂದು ಮಧ್ಯಾಹ್ನ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಸತೀಶ್ ಹಾಗೂ ವೀಣಾ ಮಗನನ್ನು ಕಳೆದು ಕೊಂಡು ನೋವಿನಲ್ಲಿದ್ದರು. ಈ ನೋವಿನಿಂದ ಹೊರಬರಲು ಸಮಾಜಸೇವೆ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ನಂತರ ಇಂದು ಮಧ್ಯಾಹ್ನ ಸರಸ್ವತಿಪುರಂನ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ವಿರಾಟ್ ಕೊಹ್ಲಿ ಮೇಣದ ಪ್ರತಿಮೆ

ನವದೆಹಲಿ, ಮಾ. 28: ಜಗತ್ತಿನ ಖ್ಯಾತ ವಿಖ್ಯಾತರ ಮೇಣದ ಪ್ರತಿಮೆಗಳಿಗೆ ಹೆಸರಾಗಿರುವ ಪ್ರತಿಷ್ಟಿತ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನ ದೆಹಲಿ ಶಾಖೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆ ಶೀಘ್ರ ಅನಾವರಣಗೊಳ್ಳಲಿದೆ. ಇಂದು ಲಂಡನ್‍ನಿಂದ ದೆಹಲಿ ಆಗಮಿಸಿರುವ ವಿಶ್ವ ಪ್ರಸಿದ್ಧ ಕಲಾವಿದರನ್ನು ಒಳಗೊಂಡ ತಂಡ ಕೊಹ್ಲಿ ಅವರನ್ನು ಭೇಟಿ ಮಾಡಿ ಅವರ ದೇಹದ ಎಲ್ಲಾ ಅಂಗಗಳ ಅಳತೆ ತೆಗೆದುಕೊಂಡಿದೆ. ಈಗಗಾಲೇ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಕ್ರಿಕೆಟ್ ದಿಗ್ಗಜರಾದ ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ಲಯೊನೆಲ್ ಮೆಸ್ಸಿ ಅವರ ಮೇಣದ ಪ್ರತಿಮೆಗಳಿದ್ದು, ವಿರಾಟ್ ಕೊಹ್ಲಿ ಪ್ರತಿಮೆ ಕೂಡ ಸೇರ್ಪಡೆಯಾಗಲಿದೆ.