ಶ್ರೀಮಂಗಲ, ಮಾ. 28: ಬಿರುನಾಣಿಯಲ್ಲಿ ಬೈಕ್‍ನಲ್ಲಿ ತೆರಳುತ್ತಿದ್ದ ಸಂದರ್ಭ ಕಾಡುಕೋಣ ಬೈಕ್‍ನ ಮೇಲೆ ಧಾಳಿ ನಡೆಸಿದ ಪರಿಣಾಮ ಯುವಕನೋರ್ವ ತೀವ್ರವಾಗಿ ಗಾಯಗೊಂಡಿದ್ದು, ಮತ್ತೋರ್ವ ಯುವಕ ಸಣ್ಣ ಪುಟ್ಟ ಗಾಯಗೊಂಡಿರುವ ಘಟನೆ ನಡೆದಿದೆ.

ಬಿರುನಾಣಿ ಬಿಎಸ್‍ಎನ್‍ಎಲ್ ಕೇಂದ್ರದಲ್ಲಿ ತಾತ್ಕಾಲಿಕ ಉದ್ಯೋಗದಲ್ಲಿದ್ದ ಟಿ.ಶೆಟ್ಟಿಗೇರಿ ಸಮೀಪ ಚೀಪೆಕೊಲ್ಲಿ ನಿವಾಸಿ ಗಣೇಶ್ ಅವರ ಪುತ್ರ ಹೆಚ್.ಜಿ. ಮುತ್ತಪ್ಪ ಅವರು ಘಟನೆಯಿಂದ ಗಾಯಗೊಂಡ ಯುವಕ ಮುತ್ತಪ್ಪ ಅವರ ಎದೆಯ ಪಕ್ಕೆಲುಬು ಹಾಗೂ ಎರಡು ಮಂಡಿಗಳಿಗೆ ತೀವ್ರತರದ ಗಾಯ ಉಂಟಾಗಿದ್ದು, ರಾತ್ರಿ 7.30 ಕ್ಕೆ ಈ ಘಟನೆ ಸಂಭವಿಸಿದೆ. ತಕ್ಷಣ ಸ್ಥಳೀಯ ಟಿ.ಶೆಟ್ಟಿಗೇರಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಸೆಂಟ್ ಜೋಸೆಫ್ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮುತ್ತಪ್ಪ ಅವರ ಎದೆಯ ಪಕ್ಕೆಲುಬು ಮುರಿದಿದ್ದು, ಇದರಿಂದ ಶ್ವಾಸಕೋಶಕ್ಕೂ ಹಾನಿಯಾಗಿದೆ. ಜೊತೆಯಲ್ಲಿದ್ದ ತೆರಾಲು ಗ್ರಾಮದ ಕುಶಾ ಅವರಿಗೂ ಗಾಯವಾಗಿದ್ದು, ಮುತ್ತಪ್ಪ ಅವರ ಹೊಸ ಹೀರೊ ಹೆಚ್‍ಎಫ್ ಡಿಲೇಕ್ಸ್ ಬೈಕ್‍ಗೂ ಹಾನಿಯಾಗಿದೆ.

ಆಸ್ಪತ್ರೆಯಲ್ಲಿ ಮುತ್ತಪ್ಪ ಅವರು ಚೇತರಿಸಿಕೊಳ್ಳುತ್ತಿದ್ದು, ಸಂಜೆ ವೇಳೆಗೆ ತೀವ್ರ ನಿಗಾಘಟಕದಿಂದ ವಾರ್ಡ್‍ಗೆ ಸ್ಥಂಳಾಂತರಿಸಲಾಗುವದೆಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಅರಣ್ಯ ಅಧಿಕಾರಿಗಳು ಗಾಯಗೊಂಡ ಯುವಕನಿಗೆ ಸೂಕ್ತ ಪರಿಹಾರ ಹಾಗೂ ವೈದ್ಯಕೀಯ ವೆಚ್ಚವನ್ನು ನೀಡಬೇಕೆಂದು ಗ್ರಾ.ಪಂ. ಅಧ್ಯಕ್ಷ ಬುಟ್ಟಿಯಂಡ ತಂಬಿ ನಾಣಯ್ಯ, ಬಲ್ಯಮಿದೇರಿರ ಸುರೇಶ್, ಕೀಕಣಮಾಡ ಮನು, ಹಾಗೂ ಅಣ್ಣಳಮಾಡ ಲಾಲ ಅಪ್ಪಣ್ಣ ಅವರು ಆಗ್ರಹಿಸಿದ್ದಾರೆ.