ಕೂಡಿಗೆ, ಮಾ. 27: ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿಯಲ್ಲಿ ವಾಸವಿರುವ ದಿಡ್ಡಳ್ಳಿ ನಿರಾಶ್ರಿತರ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ತಾ. 23 ರಂದು ಭೇಟಿ ನೀಡಿ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿದರು.

ನಂತರ ಮಾತನಾಡಿದ ಸಚಿವರು, ದಿಡ್ಡಳ್ಳಿಯಿಂದ ಬಸವನಹಳ್ಳಿ ಮತ್ತು ಬ್ಯಾಡಗೊಟ್ಟಕ್ಕೆ ಸ್ಥಳಾಂತರಗೊಂಡಿರುವ ಆದಿವಾಸಿಗಳ ಮನೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದಿನ ತಿಂಗಳೊಳಗೆ ಶಾಶ್ವತ ಮನೆಗಳಲ್ಲಿ ವಾಸಿಸಲು ಸೌಲಭ್ಯ ಕಲ್ಪಿಸಲಾಗುವದು. ಸರ್ಕಾರ ಆದಿವಾಸಿಗಳಿಗೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಲತೀಫ್, ಬಸವನಹಳ್ಳಿ ಗಿರಿಜನ ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್. ರಾಜಾರಾವ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್, ಪಕ್ಷದ ಪ್ರಮುಖರಾದ ಚಂದ್ರಮೌಳಿ, ಹಾಡಿಯ ಮುಖ್ಯಸ್ಥರಾದ ಪ್ರಕಾಶ, ಮಲ್ಲಪ್ಪ, ಶಿವಕುಮಾರ್, ಸ್ವಾಮಿ ಮತ್ತಿತರರು ಇದ್ದರು.