ಮಡಿಕೇರಿ, ಮಾ. 27: ಕೊಡಗು ಜಿಲ್ಲಾ ಮರಾಠ, ಮರಾಟಿ ಸಮಾಜ ಸೇವಾ ಸಂಘ ಹಾಗೂ ಅಂಭಾಭವಾನಿ ಯುವಕ-ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಜಂಟಿ ಆಶ್ರಯದಲ್ಲಿ ಏ. 14 ಮತ್ತು 15 ರಂದು 5ನೇ ವರ್ಷದ ಕ್ರೀಡಾಕೂಟ ಹಾಗೂ 22ನೇ ವರ್ಷದ ವಾರ್ಷಿಕ ಮಹಾಸಭೆ ಮೂರ್ನಾಡು ವಿದ್ಯಾ ಸಂಸ್ಥೆಯ ಮೈದಾನದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಡಗು ಜಿಲ್ಲಾ ಮರಾಠ, ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ.ಎಂ. ಪರಮೇಶ್ವರ್ ಈ ಬಗ್ಗೆ ತಿಳಿಸಿದರು. ಏ. 14 ರಂದು ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಸಭಾ ಕಾರ್ಯಕ್ರಮವನ್ನು ತಾಳತ್ತ್‍ಮನೆಯ ಮರಾಠ-ಮರಾಟಿ ಸಮಾಜ ಸೇವಾ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಟಿ. ಗುರುವಪ್ಪ ಉದ್ಘಾಟಿಸಲಿದ್ದಾರೆ. ಕ್ರೀಡಾಕೂಟಕ್ಕೆ ಜಿ.ಪಂ. ಮಾಜಿ ಸದಸ್ಯ ಎಂ.ಟಿ. ನಾರಾಯಣ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಅಂದು ಪುರುಷರಿಗೆ ಟೆನ್ನಿಸ್ ಬಾಲ್ ಕ್ರಿಕೆಟ್, ಮಹಿಳೆಯರಿಗೆ ಮತ್ತು ಪುರುಷರಿಗೆ ಥ್ರೋ ಬಾಲ್, ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ. ಏ. 15 ರಂದು ಬೆಳಿಗ್ಗೆ 9 ಗಂಟೆಗೆ ಪುರುಷರಿಗೆ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ, ಬಾರದ ಗುಂಡು ಎಸೆತ, 100 ಮೀ. ಓಟ, ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ನಿಂಬೆ ಚಮಚ ಓಟ, ಸೂಜಿ ನೂಲು ಓಟ ಆಯೋಜಿಸಲಾಗಿದ್ದು, 7 ವರ್ಷದ ಕೆಳಗಿನ ಹೆಣ್ಣು ಮತ್ತು ಗಂಡು ಮಕ್ಕಳಿಗೆ 50 ಮೀ. ಓಟ, 13 ವರ್ಷ ಮೇಲ್ಪಟ್ಟ ಹೆಣ್ಣು ಮತ್ತು ಗಂಡು ಮಕ್ಕಳಿಗೆ 100 ಮೀ. ಹಾಗೂ 50 ವರ್ಷ ಮೇಲ್ಪಟ್ಟ ಪುರುಷರಿಗೆ ಮತ್ತು ಮಹಿಳೆಯರಿಗೆ 100 ಮೀ. ನಡಿಗೆ ಸ್ಪರ್ಧೆ, ಮಹಿಳೆಯರಿಗೆ ಸಂಗೀತ ಕುರ್ಚಿ ಹಾಗೂ 5 ವರ್ಷ ಕೆಳಗಿನ ಹೆಣ್ಣು ಮತ್ತು ಗಂಡು ಮಕ್ಕಳಿಗೆ 50 ಮೀ. ಕಪ್ಪೆ ಜಿಗಿತ ಓಟ ಹಾಗೂ ಕಾಳು ಹೆಕ್ಕುವ ಸರ್ಧೆಯನ್ನು ಏರ್ಪಡಿಸಲಾಗಿದೆ. ಅಲ್ಲದೆ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಮತ್ತು ಹಿರಿಯ ನಾಗರಿಕರಿಗೆ ಬಕೆಟ್‍ಗೆ ಬಾಲ್ ಹಾಕುವದು ಹಾಗೂ ಸಾಮಾನ್ಯ ಜ್ಞಾನ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು.
ಅಂದು ಸಂಜೆ 3 ಗಂಟೆಗೆ ವಾರ್ಷಿಕ ಮಹಾಸಭೆ ಮತ್ತು ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ಕಾರ್ಯಕ್ರಮವನ್ನು ಕೇರಳದ ಮರಾಟಿ ಯುವ ಪೀಳಿಗೆ ಸಂಘದ ಸ್ಥಾಪಕ ಅಧ್ಯಕ್ಷ ಸುಬ್ರಾಯ ನಾಯ್ಕ ಉದ್ಘಾಟಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಮರಾಠ, ಮರಾಟಿ ಸಂಘದ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಮಂಜುನಾಥ್, ವೀರಾಜಪೇಟೆ ಕಾರ್ಯದರ್ಶಿ ಮೋಹನ್, ಅಂಭಾಭವಾನಿ ಯುವಕ-ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ಅಧ್ಯಕ್ಷರಾದ ದಿವ್ಯಕುಮಾರ್ ಹಾಗೂ ಕಾರ್ಯದರ್ಶಿ ಚೇತನ್ ಉಪಸ್ಥಿತರಿದ್ದರು.