ಕುಶಾಲನಗರ, ಮಾ 25: ಕ್ರೀಡಾಕೂಟಗಳ ಮೂಲಕ ಸಾಮರಸ್ಯ ವೃದ್ಧಿ ಸಾಧ್ಯ ಎಂದು ಕುಡಾ ಮಾಜಿ ಅಧ್ಯಕ್ಷರಾದ ಎಸ್.ಎನ್. ನರಸಿಂಹಮೂರ್ತಿ ಹೇಳಿದರು.

ಕುಶಾಲನಗರದ ಯೂತ್ ಫ್ರೆಂಡ್ಸ್ ಸಂಘದ ಆಶ್ರಯದಲ್ಲಿ ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್, ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಯೋಗದಲ್ಲಿ ಪಟ್ಟಣದ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ 3ನೇ ವರ್ಷದ ರಾಜ್ಯಮಟ್ಟದ ಪುರುಷರ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶಕ್ಕೆ ಸೈನಿಕರು ಹಾಗೂ ಕ್ರೀಡಾಪಟುಗಳನ್ನು ನೀಡಿದ ಕೊಡಗು ಜಿಲ್ಲೆ ಹಾಕಿ ಕ್ರೀಡೆಯಲ್ಲಿ ತನ್ನ ಛಾಪು ಮೂಡಿಸಿದೆ. ಗ್ರಾಮೀಣ ಕ್ರೀಡೆ ಕಬಡ್ಡಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುವ ಸಂಘಟನೆಗಳ ಕಾರ್ಯೋನ್ಮುಖವಾಗಬೇಕಾಗಿದೆ ಎಂದರು.

ಯೂತ್ ಫ್ರೆಂಡ್ಸ್ ಸಂಘದ ಅಧ್ಯಕ್ಷ ಎಂ.ಮಹೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಶಾಲನಗರ ಪಟ್ಟಣ ಪಂಚಾಯ್ತಿ ಸದಸ್ಯರುಗಳಾದ ಹೆಚ್.ಜೆ.ಕರಿಯಪ್ಪ, ಫಜಲುಲ್ಲಾ, ಪ್ರಮೋದ್ ಮುತ್ತಪ್ಪ, ನಂಜುಂಡಸ್ವಾಮಿ, ಕಾಂಗ್ರೆಸ್ ನಗರಾಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಜೆ.ಶಿವಶಂಕರ್, ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಉತ್ತಪ್ಪ, ತೀರ್ಪುಗಾರರಾದ ಷಣ್ಮುಗಂ ಇದ್ದರು. ಅಂಬೆಕಲ್ ಇಂದಿರಾ ಪ್ರಾರ್ಥಿಸಿದರು, ಗುರುರಾಜ್ ನಿರೂಪಿಸಿದರು. ಪಂದ್ಯಾಟದಲ್ಲಿ 15 ಕ್ಕೂ ಅಧಿಕ ತಂಡಗಳು ಪಾಲ್ಗೊಂಡಿದ್ದವು.