ಶನಿವಾರಸಂತೆ, ಮಾ. 25: ಪಟ್ಟಣದ ತ್ಯಾಗರಾಜ ಕಾಲೋನಿಯ ಸಮುದಾಯ ಭವನದಲ್ಲಿ ನೂತನ ಮಡಿವಾಳ ಮಾಚಿದೇವರ ಸಂಘವನ್ನು ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಿದರು.

ನೆಮ್ಮದಿಯ ಸುಖೀ ಜೀವನ ನಡೆಸುವ ಅಧಿಕಾರ ಭಾರತದಲ್ಲಿ ಎಲ್ಲಾ ಜನಾಂಗದವರಿಗೂ ಇದೆ. ಪ್ರತಿ ಜನಾಂಗವೂ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕøತಿಕವಾಗಿ ಹಾಗೂ ರಾಜಕೀಯವಾಗಿ ಬಲಿಷ್ಠರಾಗಬೇಕು ಎಂದು ಶಾಸಕರು ಹೇಳಿದರು.

ಮಾಜಿ ಸಚಿವ ಬಿ.ಎ. ಜೀವಿಜಯ ಮಾತನಾಡಿ, ಯಾವದೇ ಜನಾಂಗ ಶಕ್ತಿ ಪ್ರದರ್ಶನ ಹಾಗೂ ಹೋರಾಟದಿಂದ ಸರ್ಕಾರದ ಸೌಲಭ್ಯ ಪಡೆದು ಅಭಿವೃದ್ಧಿ ಹೊಂದಬಹುದು ಎಂದರು. ಮುದ್ದಿನಕಟ್ಟೆ ಮಠಾಧೀಶ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪರಿಶ್ರಮ ಮತ್ತು ಸ್ವಾಭಿಮಾನದ ನೆಲೆಗಟ್ಟಿನಲ್ಲಿ ಬೆಳೆದು ಬಂದ ಮಡಿವಾಳ ಸಮಾಜ ಸಂಘಟನೆಯಿಂದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದರು.

ಕಾಂಗ್ರೆಸ್ ಮುಖಂಡ ಚಂದ್ರಮೌಳಿ ಮಾತನಾಡಿ, ಮಡಿವಾಳರು ಕಾಯಕಕ್ಕೆ ಅರ್ಥಕೊಟ್ಟವರು ಎಂದು ಹೇಳಿದರು. ಮಡಿವಾಳ ಸಂಘ ರಾಜ್ಯ ಘಟಕದ ಅಧ್ಯಕ್ಷ ನಂಜಪ್ಪ ಮಾತನಾಡಿ, ಸಂಘಟನೆಯಿಂದಷ್ಟೇ ಜನಾಂಗ ಗುರುತಿಸಲ್ಪಡುತ್ತದೆ ಎಂದರು. ಶನಿವಾರಸಂತೆ ಮತ್ತು ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಗೌಸ್ ಹಾಗೂ ಸಿ.ಜೆ. ಗಿರೀಶ್, ಜೆಡಿಎಸ್ ಮುಖಂಡ ಎಂ.ಎ. ಆದಿಲ್ ಪಾಶ, ಮಡಿವಾಳ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಡಿ. ನಂಜಪ್ಪ, ಹಾಸನ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಮಡಿವಾಳ ಮಾಚಿದೇವರ ಸಂಘದ ಅಧ್ಯಕ್ಷ ಎನ್.ಕೆ. ಪುಟ್ಟಣ್ಣ ಮಾತನಾಡಿ, ಸಂಘಟನೆಯ ಕೊರತೆಯಿಂದ ಮಡಿವಾಳರು ಹಿಂದೆ ಉಳಿದಿದ್ದಾರೆ. ಸರ್ಕಾರ ಮೀಸಲಿಟ್ಟ ಹಣ ಪಡೆಯಲಾದರೂ ಸಂಘಟಿತರಾಗಬೇಕು ಎಂದರು.

ಜಿಲ್ಲಾ ಘಟಕದ ಕಾರ್ಯದರ್ಶಿ ಪಿ.ಜಿ. ಮಂಜುನಾಥ್, ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ, ಪ್ರಮುಖರಾದ ಎಸ್.ಎನ್. ರಘು, ಎಸ್.ಸಿ. ಶರತ್ ಶೇಖರ್, ಎಚ್.ಆರ್. ಹರೀಶ್, ಎಎಸ್‍ಐ ಶಿವಲಿಂಗಯ್ಯ, ಕೆ.ಪಿ. ಜಯಕುಮಾರ್, ಎಚ್.ಎಸ್. ರಾಮಶೆಟ್ರು ಉಪಸ್ಥಿತರಿದ್ದರು. ಶಿಕ್ಷಕ ಜಯಕುಮಾರ್ ನಿರೂಪಿಸಿದರು.