ಸೋಮವಾರಪೇಟೆ, ಮಾ. 25: ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅವರ ಮೇಲೆ ಕಾಂಗ್ರೆಸ್ ಪಕ್ಷದ ಕೆಲ ಸದಸ್ಯರು ದೌರ್ಜನ್ಯ ನಡೆಸಿದ್ದು, ತಕ್ಷಣ ಇವರುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಂತಹ ವರ್ತನೆ ತೋರಿದವರ ಸದಸ್ಯತ್ವ ರದ್ದುಗೊಳಿಸಬೇಕೆಂದು ಬಿಜೆಪಿ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ವಕ್ತಾರ ಎಂ.ಬಿ. ಅಭಿಮನ್ಯುಕುಮಾರ್, ಪ.ಪಂ. ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆಯ ವೈಯಕ್ತಿಕ ವಿಚಾರಗಳನ್ನು ಎತ್ತಿರುವವರು ತಮ್ಮ ಕೌಟುಂಬಿಕ ಹಿನ್ನೆಲೆಯನ್ನೊಮ್ಮೆ ನೋಡಿಕೊಳ್ಳಲಿ. ಅಭಿವೃದ್ಧಿ ಮರೆತ ಕಾಂಗ್ರೆಸ್ ಸದಸ್ಯರು ಸಭೆಗಳಲ್ಲಿ ವೈಯಕ್ತಿಕ ಚರ್ಚೆ ನಡೆಸುತ್ತಿರುವದು ಖಂಡನೀಯ ಎಂದರು.
ಕೊಡಗಿನಲ್ಲಿ ಸಂಘಪರಿವಾರಕ್ಕೂ ಬಿಜೆಪಿಗೂ ಯಾವದೇ ಒಡಕಿಲ್ಲ. ಪರಿವಾರವು ರಾಷ್ಟ್ರ ನಿರ್ಮಾಣದೊಂದಿಗೆ ಹಿಂದುತ್ವದ ಪ್ರಬಲ ಪ್ರತಿಪಾದಕರಾಗಿ, ಉನ್ನತ ಧ್ಯೇಯದೊಂದಿಗೆ ಕೆಲಸ ಮಾಡುತ್ತಿದೆ. ಯಾರಿಗೇ ಟಿಕೆಟ್ ಲಭಿಸಿದರೂ ಪರಿವಾರ ಹಾಗೂ ಬಿಜೆಪಿ ಒಟ್ಟಾಗಿ ಕೆಲಸ ಮಾಡಿ ಅಭ್ಯರ್ಥಿಯನ್ನು ಗೆಲ್ಲಿಸಲಾಗುವದು ಎಂದರು.
ಚುನಾವಣೆಯಲ್ಲಿ ಸೋಲಿನ ಭೀತಿ ಎದುರಿಸುತ್ತಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಶಾಸಕ ಅಪ್ಪಚ್ಚುರಂಜನ್‍ರವರ ಜನಪ್ರಿಯತೆಯನ್ನು ಸಹಿಸಲಾರದೆ ಅವಹೇಳನಕಾರಿ ಬರಹ ಪ್ರಕಟಿಸಿದ್ದು, ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದರು.
ಗೋಷ್ಠಿಯಲ್ಲಿದ್ದ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಮಾತನಾಡಿ, ನಡಾವಳಿ ಪ್ರಕಾರ ಸಭೆಯಲ್ಲಿ ಚರ್ಚಿಸದೇ ಕೆ.ಎ.ಆದಂ, ಶೀಲಾ ಡಿಸೋಜ ಅವರುಗಳು ವೈಯಕ್ತಿಕ ವಿಚಾರಗಳನ್ನು ಎತ್ತಿ ಸಭೆಯ ದಿಕ್ಕು ತಪ್ಪಿಸಿದ್ದಾರೆ. 3 ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದರೂ ಸಾಮಾನ್ಯ ಪ್ರಜ್ಞೆ ಇಲ್ಲ. ಮೊನ್ನೆ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ತನ್ನ ಮೇಲೆ ಸದಸ್ಯೆ ಶೀಲಾ ಡಿಸೋಜ ಅವರು ಹಲ್ಲೆ ಮಾಡಿದ್ದಾರೆ. ಈ 2 ವರ್ಷದಲ್ಲಿ ಅಭಿವೃದ್ಧಿ ಕಾರ್ಯದ ಬಗ್ಗೆ ಇವರುಗಳು ಯಾವದೇ ಚರ್ಚೆ ನಡೆಸಿಲ್ಲ. ನಿನ್ನೆಯ ಸಾಮಾನ್ಯ ಸಭೆಯಲ್ಲಿ ನಡೆಸಿದ ದೌರ್ಜನ್ಯದ ವಿರುದ್ಧ ಜಿಲ್ಲಾಧಿಕಾರಿಗಳು ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದೇನೆ ಎಂದರು.
ಹಕ್ಕುಪತ್ರ ನೀಡುವದಾಗಿ ಜನರಿಂದ ಸದಸ್ಯರೋರ್ವರು ರೂ. 30 ಸಾವಿರ ಹಣ ಪಡೆದಿದ್ದಾರೆ. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಬಗ್ಗೆ ಚರ್ಚೆ ನಡೆಯಲೇಬಾರದು ಎಂಬ ದುರುದ್ದೇಶದಿಂದ ಕಾಂಗ್ರೆಸ್ ಸದಸ್ಯರುಗಳು ಸಭೆಯನ್ನು ಬಹಿಷ್ಕರಿಸಿ ಗದ್ದಲ ಎಬ್ಬಿಸಿ ಹೊರ ನಡೆದಿದ್ದಾರೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಿಬ್ಬೆಟ್ಟ ಮಧು, ನಗರ ಅಧ್ಯಕ್ಷ ಎಸ್.ಆರ್. ಸೋಮೇಶ್, ತಾಲೂಕು ಶಿಕ್ಷಕರ ಪ್ರಕೋಷ್ಠದ ಅಧ್ಯಕ್ಷ ಜೆ.ಸಿ. ಶೇಖರ್ ಉಪಸ್ಥಿತರಿದ್ದರು.