ಕುಶಾಲನಗರ, ಮಾ 25: ವಿಶ್ವ ಜಲ ದಿನಾಚರಣೆ ಅಂಗವಾಗಿ ಕುಶಾಲನಗರದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಆಶ್ರಯದಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸ್ಟುಡೆಂಟ್ ಪೊಲೀಸ್ ಕೆಡೆಟ್, ವಿವಿಧ ಶಾಲೆಗಳ ಇಕೋ ಕ್ಲಬ್, ಕುಶಾಲನಗರ ಪಟ್ಟಣ ಪಂಚಾಯಿತಿ ಹಾಗೂ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಜೀವಜಲವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪಟ್ಟಣದ ಮುಖ್ಯ ರಸ್ತೆಯಲ್ಲಿ ಜಾಥಾ ನಡೆಸಿ ಪರಿಸರಕ್ಕೆ ಸಂಬಂಧಿಸಿದ ಘೋಷಣೆಗಳನ್ನು ಕೂಗಿದರು. ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಕಾವೇರಿ ನದಿ ತಟಕ್ಕೆ ತೆರಳಿದ ವಿದ್ಯಾರ್ಥಿಗಳಿಗೆ ನದಿಯ ವಾಸ್ತವಾಂಶದ ಬಗ್ಗೆ ಅರಿವು ಮೂಡಿಸಲಾಯಿತು. ಈ ಸಂದರ್ಭ ಮಾತನಾಡಿದ ಕರಾವಿರ ಜಿಲ್ಲಾ ಸಮಿತಿ ಸಂಚಾಲಕ ಟಿ.ಜಿ. ಪ್ರೇಮ್‍ಕುಮಾರ್, ನೀರು ಅಮೂಲ್ಯ ಸಂಪತ್ತಾಗಿದ್ದು ಅದರ ರಕ್ಷಣೆಯಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ. ಪರಿಸರ ಸಂರಕ್ಷಣೆಯೊಂದಿಗೆ ನೀರಿನ ಸಂರಕ್ಷಣೆ ಮಾಡಬೇಕು. ಕಸಮುಕ್ತ, ಮಾಲಿನ್ಯಮುಕ್ತ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಪರಿಸರ ಪ್ರಜ್ಞೆ ಮೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಈ ಸಂದರ್ಭ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮಾತನಾಡಿ, ಶುದ್ಧವಾಗಿ ಹರಿಯುವ ನದಿಯನ್ನು ಸ್ವಚ್ಛವಾಗಿ ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ. ವರ್ಷದ ಎಲ್ಲಾ ದಿನಗಳಲ್ಲಿ ನೀರಿನ ಮಹತ್ವವನ್ನು ಅರಿಯುವ ಮೂಲಕ ಅದರ ಬಳಕೆಯಾಗಬೇಕಾಗಿದೆ ಎಂದರು. ಕರಾವಿಪ ಜಿಲ್ಲಾ ಸಮಿತಿ ಅಧ್ಯಕ್ಷ ಫಿಲಿಪ್ ವಾಸ್, ಕಸಾಪ ಜಿಲ್ಲಾ ಅಧ್ಯಕ್ಷ ಲೋಕೇಶ್ ಸಾಗರ್, ಪಟ್ಟಣ ಪಂಚಾಯಿತಿ ಅಧಿಕಾರಿ ಸತೀಶ್, ಜೂನಿಯರ್ ಕಾಲೇಜು ಸಹಾಯಕ ಕಮ್ಯುನಿಟಿ ಪೊಲೀಸ್ ಅಧಿಕಾರಿ ತುಳಸಿ, ಕರಾವಿಪ ಪ್ರಮುಖರಾದ ಶ್ರೀಹರ್ಷ, ಉಪನ್ಯಾಸಕ ಶ್ರೀಧರ್ ಇದ್ದರು.