ಸಿದ್ದಾಪುರ, ಮಾ. 25: ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಅವರನ್ನು ಕಣಕ್ಕೆ ಇಳಿಸಲು ಬಿಜೆಪಿ ಯುವ ಮೋರ್ಚಾ ಒತ್ತಾಯಿಸಿದೆ. ಇತ್ತೀಚೆಗೆ ಈ ಬಗ್ಗೆ ಸಭೆ ಸೇರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಹೊಸ ಮುಖಕ್ಕೆ ಅವಕಾಶ ಕೊಡಬೇಕೆಂಬ ನಿರ್ಣಯ ಕೈಗೊಳ್ಳಲಾಯಿತು.ವಾಲ್ನೂರು, ತ್ಯಾಗತ್ತೂರು, ಕೂಡ್ಲೂರು, ಚೆಟ್ಟಳ್ಳಿ, ನೆಲ್ಲಿಹುದಿಕೇರಿ, ಆಭ್ಯತ್‍ಮಂಗಲ, ಚೆಟ್ಟಳ್ಳಿ ವಿಭಾಗದ ಬಿಜೆಪಿ ಕಾರ್ಯಕರ್ತರು ಒಂದೆಡೆ ಸೇರಿ ಚರ್ರ್ಚಿಸಿ ಈ ಬಾರಿ ಹೊಸಬರಿಗೆ ಬಿಜೆಪಿ ಹೈಕಮಾಂಡ್ ಅವಕಾಶ ಕಲ್ಪಿಸಬೇಕೆಂದು ರಾಜ್ಯ ಬಿಜೆಪಿ ಕಾರ್ಯಾಲಯಕ್ಕೆ ಪತ್ರ ಬರೆಯಲು ತೀರ್ಮಾನಿಸಲಾಯಿತು. ಯುವ ಮೋರ್ಚಾ ಕಾರ್ಯದರ್ಶಿ ಯದುಕುಮಾರ್, ಅವಿಲಾಶ್, ಕವಿ, ಕೃಷ್ಣಪ್ಪ, ರಾಜೇಶ್, ತಿಮ್ಮಪ್ಪ, ದಾಮೋದರ, ಜಯಕುಮಾರ್ ಹಾಗೂ ಹೇಮಂತ್ ಈ ಬಗ್ಗೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.