ಸೋಮವಾರಪೇಟೆ, ಮಾ. 24: ಇಲ್ಲಿನ ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ದ್ವಿತೀಯ ದರ್ಜೆ ಮಹಿಳಾ ನೌಕರರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ವಾಹನ ಚಾಲಕನನ್ನು ಜಿಲ್ಲೆಯಿಂದಲೇ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ವಿವಿಧ ದಲಿತಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ ಎದುರು ಧರಣಿ ಕುಳಿತ ಪ್ರತಿಭಟನಾಕಾರರು, ಇಲಾಖೆಯ ವಾಹನ ಚಾಲಕ ಮತ್ತು ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಕಚೇರಿಯ ಮಹಿಳಾ ಸಿಬ್ಬಂದಿ ಯೋರ್ವರಿಗೆ ವಾಹನ ಚಾಲಕ ಮಂಜುನಾಥ್ ಎಂಬವರು ಲೈಂಗಿಕ ಕಿರುಕುಳ ನೀಡಿ ಜಾತಿ ನಿಂದನೆ ಮಾಡಿರುವ ಬಗ್ಗೆ ಕಳೆದ 22.08.2017ರಂದು ಸೋಮವಾರ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆ ಸಂದರ್ಭ ಅಮಾನತುಗೊಂಡಿದ್ದ ವಾಹನ ಚಾಲಕನನ್ನು ಇದೀಗ ಮತ್ತೆ ಇದೇ ಕಚೇರಿಗೆ ನೇಮಿಸಿರುವದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮಹಿಳಾ ಒಕ್ಕೂಟದ ಅಧ್ಯಕ್ಷ ಮಮತ, ಎಸ್.ಆರ್. ವಸಂತ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಮನವಿ ಆಲಿಸಿದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರಕುಮಾರ್ ಅವರು, ಚಾಲಕ ಮಂಜುನಾಥ್‍ನನ್ನು ಕುಶಾಲನಗರದ ನಿರೀಕ್ಷಣಾ ಮಂದಿರಕ್ಕೆ ನಿಯೋಜಿಸಲಾಗುವದು ಎಂದು ತಿಳಿಸಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಆತನನ್ನು ಕೊಡಗು ಜಿಲ್ಲೆಯಿಂದಲೇ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾದ್ಯಂತ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಹೋರಾಟ ತೀವ್ರಗೊಳಿಸಲಾಗುವದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಈ ಸಂಬಂಧಿತ ಮನವಿ ಪತ್ರವನ್ನು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಿದರಲ್ಲದೇ, ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ಮುಂದುವರೆಸಿದರು.
ಸಂಜೆ ವೇಳೆಗೆ ಮಂಜುನಾಥ್ ಅವರನ್ನು ಮಡಿಕೇರಿ ಕಚೇರಿಗೆ ವರ್ಗಾಯಿಸಿರುವ ಬಗ್ಗೆ ಅಧಿಕೃತ ಆದೇಶ ಕಾರ್ಯಪಾಲಕ ಅಭಿಯಂತರರ ಕಚೇರಿಯಿಂದ ಫ್ಯಾಕ್ಸ್ ಮೂಲಕ ಬಂದಿರುವದಾಗಿ ಇಲಾಖೆಯ ಎಇಇ ಮಹೇಂದ್ರ ಕುಮಾರ್ ತಿಳಿಸಿದ ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು.
ಪ್ರತಿಭಟನೆಯಲ್ಲಿ ಪ.ಜಾ. ಮತ್ತು ಪ.ಪಂ. ಸಂಘಟನೆಗಳ ಜಿಲ್ಲಾಧ್ಯಕ್ಷ ಎಂ.ಪಿ. ಹೊನ್ನಪ್ಪ, ಯರಪಾರೆ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಲೋಕೇಶ್, ಗಣಗೂರು ಸ್ತ್ರೀಶಕ್ತಿ ಸಂಘದ ಅಧ್ಯಕ್ಷೆ ಭಾಗ್ಯ, ಪ್ರಮುಖರಾದ ಎಸ್.ಎ. ಪ್ರತಾಪ್, ವಿಜಯಕುಮಾರ್, ರಾಮಕೃಷ್ಣ, ಕೃಷ್ಣಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.