ಮಡಿಕೇರಿ, ಮಾ. 24: ಶ್ರೀ ರಾಮ ನವಮಿ ಪ್ರಯುಕ್ತ ತಾ. 25 ರಂದು (ಇಂದು) ನಾಡಿನೆಲ್ಲೆಡೆ ಅಲ್ಲಲ್ಲಿ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.ಮಡಿಕೇರಿ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡರಾಮ ದೇವಾಲಯದಲ್ಲಿ ಶ್ರೀ ರಾಮ ನವಮಿಯಾದ ಇಂದು ಮುಂಜಾನೆ ಐದು ಗಂಟೆಗೆ ಗಣಪತಿ ಹೋಮ, ಪಂಚಾಮೃತ ಅಭಿಷೇಕ, ಪುಷ್ಪ ಅಲಂಕಾರ ಹಾಗೂ ವಸ್ತ್ರಾಲಂಕಾರ ಸೇವೆ ನಡೆಯಲಿದೆ. ಬೆಳಿಗ್ಗೆ 8 ಗಂಟೆಗೆ ದೇವಾಲಯ ಆವರಣದಿಂದ ಉತ್ಸವ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಇರಿಸಿ ಕಲಶ, ಚಂಡೆ, ಕಲಾ ತಂಡಗಳ ಸಹಿತ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮರಳಿ ದೇವಾಲಯದಲ್ಲಿ ವಿಶೇಷ ಮಹಾಪೂಜೆ ಬಳಿಕ ಕೊಸಂಬರಿ ಪಾನಕ, ಅನ್ನಸಂತರ್ಪಣೆ ಜರುಗಲಿದೆ.
ಆಂಜನೇಯ ಗುಡಿ: ಶ್ರೀ ಓಂಕಾರೇಶ್ವರ ದೇವಾಲಯ ಬಳಿ ಆಂಜನೇಯ ಗುಡಿಯಲ್ಲಿ ಶ್ರೀರಾಮ ನವಮಿ ಪ್ರಯುಕ್ತ ಬೆಳಿಗ್ಗೆ 7.30ಕ್ಕೆ ರಾಮ ತಾರಕ ಹೋಮ, 11.30ಕ್ಕೆ ಮಹಾ ಮಂಗಳಾರತಿಯೊಂದಿಗೆ ಕೋಸಂಬರಿ ಪ್ರಸಾದ ವಿತರಣೆ ನೆರವೇರಲಿದೆ. ಅಲ್ಲದೆ ಪ್ರತಿವರ್ಷದಂತೆ ರಾಮೋತ್ಸವ ಸಮಿತಿ ವತಿಯಿಂದ ಇಲ್ಲಿನ ಓಂಕಾರ ಸದನದಲ್ಲಿ ತಾ. 18 ರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ರಾಮೋತ್ಸವ ಸಲುವಾಗಿ ಬೆಳಿಗ್ಗೆ 10 ರಿಂದ 12 ಗಂಟೆ ತನಕ ಸ್ತೋತ್ರ ಪಠನ ಹಾಗೂ ಸಂಜೆ 6 ರಿಂದ ಜಲತರಂಗ ಕಾರ್ಯಕ್ರಮ ಏರ್ಪಡಿಸಲಾಗಿದೆ.
ದೇಚೂರು: ಮಡಿಕೇರಿಯ ದೇಚೂರು ಶ್ರೀ ರಾಮ ಮಂದಿರದಲ್ಲಿ ವಾರ್ಷಿಕ ರಾಮೋತ್ಸವ ಪೂಜಾ ಕೈಂಕರ್ಯ ಏರ್ಪಡಿಸಲಾಗಿದೆ. ಮಡಿಕೇರಿ ಪೇಟೆ ಶ್ರೀ ರಾಮ ಮಂದಿರದಲ್ಲಿಯೂ ಈ ಪ್ರಯುಕ್ತ ವಿಶೇಷ ಪೂಜಾದಿ ನಡೆಯಲಿದೆ.
ಕಣಿವೆ: ಕಣಿವೆಯ ಐತಿಹಾಸಿಕ ಶ್ರೀ ರಾಮಲಿಂಗೇಶ್ವರ ದೇವಾಲಯದಲ್ಲಿ ಶ್ರೀ ರಾಮೋತ್ಸವ ಹಾಗೂ ದೇವರ ರಥೋತ್ಸವ, ವಿಶೇಷ ಪೂಜಾದಿಗಳನ್ನು ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 1.15ಕ್ಕೆ ಅಭಿಜಿತ್ ಲಗ್ನದೊಂದಿಗೆ ಆರಂಭಗೊಳ್ಳಲಿರುವ ಬ್ರಹ್ಮ ರಥೋತ್ಸವವು ಮುಂದುವರಿಯಲಿದೆ. ಅಲ್ಲದೆ ಸನ್ನಿಧಿಯಲ್ಲಿ ಉಷಾಕಾಲದಿಂದ ವಿಶೇಷ ಪೂಜೆ, ಅಭಿಷೇಕ, ಪಂಚಾಮೃತಾಭಿಷೇಕ, ಗಂಗಾಜಲಾಭಿಷೇಕ, ಮಹಾಪೂಜೆ ನೆರವೇರಲಿದೆ.
ಭಾಗಮಂಡಲ: ಇಲ್ಲಿನ ಶ್ರೀ ಮಹಾವಿಷ್ಣು ಸನ್ನಿಧಿಯಲ್ಲಿ ಶ್ರೀ ರಾಮನವಮಿ ಪ್ರಯುಕ್ತ ವಿಶೇಷ ಅಲಂಕಾರ ಪೂಜೆ, ವಿವಿಧ ಸೇವೆಗಳು ದೇವಾಲಯ ವ್ಯವಸ್ಥಾಪನಾ ಸಮಿತಿ ನೇತೃತ್ವದಲ್ಲಿ ಜರುಗಲಿದೆ. ರಾಮಮಂದಿರದಲ್ಲಿಯೂ ಪ್ರತಿವರ್ಷದಂತೆ ರಾಮೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.
ಸುಂಟಿಕೊಪ್ಪ: ಇಲ್ಲಿನ ಶ್ರೀ ಕೋದಂಡರಾಮ ಸಹಿತ ಪರಿವಾರ ದೇವತೆಗಳಿಗೆ ರಾಮೋತ್ಸವ ಪ್ರಯುಕ್ತ ವಿಶೇಷ ಅಲಂಕಾರ ಪೂಜೆ, ಸೇವೆಗಳು ನಡೆಯಲಿವೆ.
ಕುಶಾಲನಗರ: ಕುಶಾಲನಗರ ರಥ ಬೀದಿಯಲ್ಲಿರುವ ಐತಿಹಾಸಿಕ ಶ್ರೀ ಆಂಜನೇಯ ದೇವಾಲಯದಲ್ಲಿ ಶ್ರೀ ರಾಮ ನವಮಿ ಪ್ರಯುಕ್ತ ರಾಮಧೂತನಿಗೆ ವಿಶೇಷ ಅಲಂಕಾರ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಮೂರ್ನಾಡು: ಮೂರ್ನಾಡುವಿನ ಶ್ರೀರಾಮ ಮಂದಿರದಲ್ಲಿ ಇಂದು ವಿಶೇಷ ಪೂಜೆ, ಭಜನೆ ನಡೆಯಲಿದೆ.
ನಾಪೋಕ್ಲು: ನಾಪೋಕ್ಲುವಿನ ಶ್ರೀ ರಾಮ ದೇವಾಲಯದಲ್ಲಿಯೂ ಶ್ರೀ ರಾಮ ನವಮಿ ಪ್ರಯುಕ್ತ ಪೂಜೆಯೊಂದಿಗೆ ದೇವತಾ ಕೈಂಕರ್ಯ ನೆರವೇರಲಿದೆ.
ಸೋಮವಾರಪೇಟೆ: ಪ್ರತಿ ವರ್ಷದಂತೆ ಸೋಮವಾರಪೇಟೆಯ ಶ್ರೀ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆಯೊಂದಿಗೆ ರಾಮೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶನಿವಾರ ಸಂತೆಯ ಶ್ರೀ ರಾಮ ಮಂದಿರ ಹಾಗೂ ಕೊಡ್ಲಿಪೇಟೆಯ ವಿಠಲ ಮಂದಿರಗಳಲ್ಲಿ ರಾಮೋತ್ಸವ ಸಲುವಾಗಿ ಪೂಜೆ ಹಮ್ಮಿಕೊಳ್ಳಲಾಗಿದೆ.