ಕೊಡ್ಲಿಪೇಟೆ: ಕೊಡ್ಲಿಪೇಟೆ ಹೋಬಳಿಯ ದೊಡ್ಡಕೊಡ್ಲಿ ಗ್ರಾಮದಲ್ಲಿ ತಾ. 25 ರಂದು (ಇಂದು) ದೇವಿರಮ್ಮ ದೇವಿಯ ವಾರ್ಷಿಕ ಸುಗ್ಗಿ ಮಹೋತ್ಸವ ನಡೆಯಲಿದೆ.

ಪ್ರತಿ ವರ್ಷ ನಡೆಯುವ ಶ್ರೀ ದೇವಿರಮ್ಮ ಸುಗ್ಗಿ ಉತ್ಸವಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ತಾಯಿ ದೇವಿರಮ್ಮ ನವರನ್ನು ಸುಗ್ಗಿಯಮ್ಮನವರು ಎಂಬ ಹೆಸರಿನಿಂದ ಕರೆಯಲ್ಪಡುವ ದೇವಿ ಸ್ಥಳೀಯರ ಆರಾದ್ಯ ದೇವತೆಯಾಗಿದ್ದಾರೆ. ಈ ಉತ್ಸವಕ್ಕೆ ದೊಡ್ಡಕೊಡ್ಲಿ, ಹೊಸಮುನ್ಸಿಪಾಲಿಟಿ, ಕಲ್ಲಳ್ಳಿ, ಕಲ್ಲಾರೆ, ಶಾಂತಪುರ, ಎಣ್ಣೆಗದ್ದೆ, ಹಂಪಾಪುರ, ಕೆಲಕೊಡ್ಲಿ, ಶಿವಪುರ, ನವಗ್ರಾಮ ಮುಂತಾದ ಗ್ರಾಮಗಳ ಸಾವಿರಾರು ಜನ ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆಯುತ್ತಾರೆ. ಗ್ರಾಮಗಳಿಗೆ ದೇವಿಯ ಸುಗ್ಗಿ ಸಾರುಬಿದ್ದು ಸುಗ್ಗಿಯ ಕೊನೆಯ ದಿನದವರೆಗೂ ಅನೇಕ ವೃತನಿಷ್ಠೆಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತದೆ.

ಹಿಂದಿನ ದಿನ ರಾತ್ರಿ ದೇವಿಗೆ ಪವಿತ್ರ ಹೇಮಾವತಿ ಗಂಗೆಯಿಂದ ದೇವರ ವಿಗ್ರಹಗಳಿಗೆ ಗಂಗೆ ಸ್ನಾನ ಮಾಡಿಸಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಪೂರ್ಣಕುಂಭ ಕಲಶ ತಂದು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಭಾನುವಾರ ರಾತ್ರಿ ದೇವಿಗೆ ಎಡೆ ಕಾರ್ಯಗಳು ಮುಗಿದ ನಂತರ ವಿದ್ಯುತ್ ದೀಪಗಳಿಂದ ಅಲಂಕೃತವಾದ ವಿಶಾಲ ಸುಗ್ಗಿಕಟ್ಟೆಯಲ್ಲಿ ಇಡಿರಾತ್ರಿ ಸುಗ್ಗಿ ಉತ್ಸವ ಜರುಗಲಿದೆ. ಈ ಸಮಯದಲ್ಲಿ ಮಲೆನಾಡಿನ ಸುಗ್ಗಿ ಕುಣಿತ, ಜಾಗಟೆ, ತಮಟೆವಾದ್ಯ, ಬಿಲ್ಲುಕುದುರೆ ಮುಂತಾದ ಜಾನಪದ ಕಲಾತಂಡಗಳ ಪ್ರದರ್ಶನವಿದೆ ಎಂದು ಸುಗ್ಗಿ ಉತ್ಸವ ಸಮಿತಿ ಅಧ್ಯಕ್ಷ ಎಸ್.ಡಿ. ತಮ್ಮಯ್ಯ ತಿಳಿಸಿದ್ದಾರೆ.