ಶ್ರೀಮಂಗಲ, ಮಾ. 24: ಕೇಂದ್ರ ವಾಣಿಜ್ಯ ಸಚಿವಾಲಯದಿಂದ ರೂ. 500ಕ್ಕಿಂತ ಕಡಿಮೆ ದರದಲ್ಲಿ ಕರಿಮೆಣಸು ಆಮದು ನಿಷೇಧ ಮಾಡಿರುವ ಅಧಿಸೂಚನೆಯಿಂದ ಬೆಳೆಗಾರರಿಗೆ ಯಾವ ರೀತಿಯಲ್ಲಿ ಇದು ಪ್ರಯೋಜನವಾಗಲಿದೆ ಎಂಬುದನ್ನು ಅದ್ಯಾಯನ ಮಾಡಿ ಮುಂದಿನ ಕಾರ್ಯ ಯೋಜನೆ ರೂಪಿಸಲಾಗುವದೆಂದು ಸಿಒಪಿಜಿಓ ಬೆಳೆಗಾರರ ಸಮನ್ವಯ ಸಂಘಟನೆಯ ಸಂಚಾಲಕ ಕೆ.ಕೆ.ವಿಶ್ವನಾಥ್ ತಿಳಿಸಿದ್ದಾರೆ.ಗೋಣಿಕೊಪ್ಪ ಸಿಲ್ವರ್ ಸ್ಕೈ ಹೊಟೇಲ್ ಸಭಾಂಗಣದಲ್ಲಿ ಕೊಡಗು ಬೆಳೆಗಾರರ ಒಕ್ಕೂಟದ ಆಶ್ರಯದಲ್ಲಿ ನಡೆದ ಬೆಳೆಗಾರರ ಸಭೆಯಲ್ಲಿ ಅವರು ಮಾತನಾಡಿದರು. ಬೆಳೆಗಾರರ ಸಮನ್ವಯ ಸಂಘಟನೆಯ ನಿಯೋಗದಿಂದ ಕರಿಮೆಣಸು ಆಮದುವಿನಿಂದ ದರ ಕುಸಿತ ಉಂಟಾಗಿ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿರುವ ಬಗ್ಗೆ ನಿರಂತರವಾಗಿ ಗಮನ ಸೆಳೆಯುತ್ತ ಬರಲಾಗುತ್ತಿದೆ. ಈ ಬಗ್ಗೆ ಕೇಂದ್ರ ವಾಣಿಜ್ಯ, ಆರ್ಥಿಕ ಸಚಿವಾಲಯ ಮತ್ತು ದಾರಿ ನಿರ್ದೇಶನಾಲಯಗಳಿಗೆ ಸಮಸ್ಯೆ ಮನವರಿಕೆ ಮಾಡಲಾಗಿದೆ ಎಂದು ಹೇಳಿದರು.

ಪ್ರಸಕ್ತ ಅಧಿಸೂಚನೆಯಿಂದ ಕರಿಮೆಣಸು ದರ ಹೆಚ್ಚಾಗುವ ಬಗ್ಗೆ ಭರವಸೆ ಇದೆ. ಆದರೆ, ಈಗಲೂ ಕಳ್ಳಸಾಗಾಣೆಯ ಮೂಲಕ ಹಾಗೂ ಇತರೆ ಕಾನೂನು ದುರುಪಯೋಗದ ಮೂಲಕ ಕರಿಮೆಣಸು ಭಾರತಕ್ಕೆ ಆಮದಾಗುವ ಸಾಧ್ಯತೆ ಇದೆ. ಈ ಹಿಂದೆ 2017ರ ನವೆಂಬರ್ 7ರ ಮೊದಲ ಅದಿಸೂಚನೆಯನ್ವಯ ಕರಿಮೆಣಸಿಗೆ ಕನಿಷ್ಠ ಆಮದು ದರವನ್ನು ರೂ 500 ನಿಗದಿಪಡಿಸಿದ್ದರೂ, ಸಮಸ್ಯೆಗೆ ಪರಿಹಾರ ದೊರೆಯಲಿಲ್ಲ. ಬದಲಾಗಿ ವ್ಯಾಪಕ ಕಾನೂನು ದುರುಪಯೋಗದಿಂದ ಕರಿಮೆಣಸು ಭಾರತಕ್ಕೆ ಪ್ರವೇಶಿಸುತ್ತಿದೆ ಎಂದು ಹೇಳಿದರು. ಕಾನೂನು ಮಾಡಿದರೂ ಆ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದಾಗ ಮಾತ್ರ ಇದರ ಪ್ರಯೋಜನ ಬೆಳೆಗಾರರಿಗೆ ಲಭ್ಯವಾಗಲಿದೆ ಎಂದು ವಿಶ್ವನಾಥ್ ಅಭಿಪ್ರಾಯ ಪಟ್ಟರು.

ಭಾರತಕ್ಕೆ ಕಳಪೆ ಕರಿಮೆಣಸು ಕಡಿಮೆ ದರದಲ್ಲಿ ಆಮದು ಮಾಡಿಕೊಳ್ಳುತ್ತಿದ್ದು, ಇದನ್ನು ಭಾರತದ ಆಂತರಿಕ ಬಳಕೆಗೆ ಬಿಡುಗಡೆ ಮಾಡಿ ಅಷ್ಟೇ ಪ್ರಮಾಣದ ಕರಿಮೆಣಸನ್ನು ಬೇರೆ ದೇಶಕ್ಕೆ ರಫ್ತು ಮಾಡಲಾಗುತ್ತಿದೆ. ಈ ಮೂಲಕ ಮರು ರಫ್ತಿಗೆ ಎಂದು ವ್ಯಾಪಾರಿಗಳು ವಿಯೆಟ್ನಾಮ್ ದೇಶದಿಂದ ಕರಿಮೆಣಸು ತಂದು ಅದೇ ಕರಿಮೆಣಸನ್ನು ರಫ್ತು ಮಾಡದೆ ಭಾರತದ ಉತ್ತಮ ಗುಣಮಟ್ಟದ ಕರಿಮೆಣಸನ್ನು ರಫ್ತು ಮಾಡಿ ವಿಯೆಟ್ನಾಮ್‍ನಿಂದ ತಂದ ಕರಿಮೆಣಸನ್ನು ಭಾರತದ ಆಂತರಿಕ ಮಾರುಕಟ್ಟೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಬಾಳೆಲೆಯ ಬೆಳೆಗಾರ ಮಲ್ಚೀರ ಬೋಸ್ ಮಾತನಾಡಿ ಕಾಫಿ ಹಾಗೂ ಕರಿಮೆಣಸು ದರ ಕುಸಿತದೊಂದಿಗೆ ಪಸಲು ಕುಂಠಿತವಾಗಿರುವದರಿಂದ ಬೆಳೆಗಾರರು

(ಮೊದಲ ಪುಟದಿಂದ) ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಬ್ಯಾಂಕ್ ಸಾಲ ಕಟ್ಟುವ ಅವಧಿಯನ್ನು ಕನಿಷ್ಠ 1 ವರ್ಷ ಮುಂದೂಡುವ ರಿಯಾಯಿತಿ ನೀಡಬೇಕು. ಮುಂದಿನ ತಿಂಗಳಲ್ಲಿ ಚುನಾವಣೆ ಹಾಗೂ ನೀತಿ ಸಂಹಿತೆ ಇರುವದರಿಂದ ಹಣದ ವಹಿವಾಟು ಸಹ ನಿರ್ಬಂಧ ಉಂಟಾಗಲಿದ್ದು, ಈ ಬಗ್ಗೆ ಸಹಕಾರ ಸಂಘಗಳಲ್ಲಿ ಕಟ್ಟಬೇಕಾದ ಸಾಲಕ್ಕೆ ರಿಯಾಯಿತಿ ಹಾಗೂ ಸಮಯಾವಕಾಶ ನೀಡುವಂತೆ ಬೆಳೆಗಾರರ ಸಂಘಟನೆ ಒತ್ತಾಯಿಸಬೇಕೆಂದು ಹೇಳಿದರು.

ಈ ಬಗ್ಗೆ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ರಿಯಾಯಿತಿ ಕೇಳಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಒಕ್ಕೂಟದ ಉಪಾಧ್ಯಕ್ಷ ಕೇಚಂಡ ಕುಶಾಲಪ್ಪ ನವರು ಮಾತನಾಡಿ ಕಾಡಾನೆ-ಹುಲಿ ಧಾಳಿಗೆ ಬೆಳೆ ಹಾಗೂ ಜಾನುವಾರುಗಳ ಸಾವಿಗೆ ತಾತ್ಕಾಲಿಕ ಪರಿಹಾರಕ್ಕಾಗಿ ಒತ್ತಾಯಿಸುವ ಬದಲು, ಈ ಹಾವಳಿಗೆ ಶಾಶ್ವತ ಯೋಜನೆ ರೂಪಿಸಲು ಕೇಂದ್ರ ಸರ್ಕಾರದ ಗಮನ ಸೆಳೆಯಬೇಕಾಗಿದೆ ಎಂದು ಸಲಹೆ ನೀಡಿದರು.

ಕುಟ್ಟದ ಬೆಳೆಗಾರ ತೀತಿರ ಮಂದಣ್ಣ ಮಾತನಾಡಿ ಕಾಡಾನೆ ಧಾಳಿಯಿಂದ ಅರಣ್ಯ ಇಲಾಖೆಯ ಅಧಿಕಾರಿ ಸತ್ತರೆ 50 ಲಕ್ಷ ಪರಿಹಾರ ಮತ್ತು ಅವರ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ನೀಡಲಾಗುತ್ತಿದೆ. ಆದರೆ, ಕಾರ್ಮಿಕ, ಬೆಳೆಗಾರರು ಹಾಗೂ ಜನಸಾಮಾನ್ಯ ಸತ್ತರೆ ಕೇವಲ ರೂ. 5 ಲಕ್ಷ ನೀಡಿ ಸರ್ಕಾರ ಕೈ ತೊಳೆದುಕೊಳ್ಳುತ್ತದೆ. ಹಾಗಾದರೆ ಸಾಮಾನ್ಯ ವ್ಯಕ್ತಿಯ ಜೀವಕ್ಕೂ ಮತ್ತು ಅಧಿಕಾರಿಯ ಜೀವಕ್ಕೂ ಮೌಲ್ಯದಲ್ಲಿ ತಾರತಮ್ಯವಿದೆಯೇ ಎಂದು ಪ್ರಶ್ನಿಸಿದರು. ಈ ಬಗ್ಗೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ ಹೋರಾಟ ನಡೆಸಲು ಸಲಹೆ ನೀಡಿದರು.

ಬಲ್ಯಮುಂಡೂರುವಿನ ಬೆಳೆಗಾರ ಕೊಟ್ಟಂಗಡ ಗಯಾ ಅವರು ಮಾತನಾಡಿ ಜಿಲ್ಲೆಯ ಹಲವೆಡೆ ಕಾಫಿ ಖರೀದಿಸಿ ವ್ಯಾಪಾರಿಗಳು ಹಣ ಪಾವತಿಸದೆ ಬೆಳೆಗಾರರಿಗೆ ಮೋಸ ಮಾಡುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ ಕಾಫಿ ಕ್ಯೂರಿಂಗ್‍ನಲ್ಲಿ ಮಿಲ್ಲ್‍ಗಳನ್ನು ಹೊರ ರಾಜ್ಯದವರಿಗೆ ನೀಡಿರುವ ಮಾಲೀಕರು ಈ ಬಗ್ಗೆ ಪೂರ್ವಪರ ಅರಿತು ಸೂಕ್ತ ದಾಖಲಾತಿ ಹಾಗೂ ಭದ್ರತೆಯನ್ನು ಪಡೆದು ಮಿಲ್ಲ್‍ಗಳನ್ನು ನೀಡಬೇಕು. ಈ ಬಗ್ಗೆ ಮಿಲ್ಲ್‍ಗಳನ್ನು ಬಾಡಿಗೆ ಅಥವಾ ಗುತ್ತಿಗೆ ನೀಡಿದ ಮಾಲೀಕರ ಜವಾಬ್ದಾರಿಯೂ ಸಹ ಇದೆ ಎಂದು ಹೇಳಿದರು.

ಶ್ರೀಮಂಗಲ ಹೋಬಳಿ ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ ಮಾತನಾಡಿ ಕೊಡಗಿನ ಬೆಳೆಗಾರರು ಹೊರ ರಾಜ್ಯದ ಜನರಿಗೆ ತಮ್ಮ ತೋಟಗಳನ್ನು ಗುತ್ತಿಗೆಗೆ ನೀಡುವದನ್ನು ನಿಲ್ಲಿಸಬೇಕು. ಇದರಿಂದ ಸ್ಥಳೀಯ ಬೆಳೆಗಾರರಿಗೆ ಅಭದ್ರತೆ ಹಾಗೂ ಇತರೆ ತೊಂದರೆ ಉಂಟಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಕುಮಟೂರು ಗ್ರಾಮದ ಪ್ರಗತಿಪರ ರೈತ ಪೆಮ್ಮಣಮಾಡ ರಮೇಶ್ ಮಾತನಾಡಿ ವರ್ಷದಲ್ಲಿ 10 ತಿಂಗಳು ರೈತರು ದುಡಿದು ಫಸಲು ಕಟಾವಿಗೆ ಬರುವ ಸಮಯದಲ್ಲಿ ಹೊರರಾಜ್ಯದವರಿಗೆ ಫಸಲು ಕುಯ್ಯಲು ಕೊಡುತ್ತಿರುವದು ಸರಿಯಲ್ಲ. ಈ ಬಗ್ಗೆ ಜಾಗೃತಿಯಾಗಬೇಕೆಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೂಟದ ಅಧ್ಯಕ್ಷ ಕೈಬೀಲಿರ ಹರೀಶ್ ಅಪ್ಪಯ್ಯನವರು ಸಂಕಷ್ಟದಲ್ಲಿರುವ ಬೆಳೆಗಾರರ ಬ್ಯಾಂಕ್ ಸಾಲಗಳನ್ನು ಬಲತ್ಕಾರ ವಸೂಲಾತಿ ಮಾಡದೆ ಸಾಲ ಮನ್ನಾ ಮಾಡುವ ನಿಟ್ಟಿನಲ್ಲಿ ಜಿಲ್ಲೆಯ ಲೀಡ್ ಬ್ಯಾಂಕ್‍ಗೆ ಒಕ್ಕೂಟದಿಂದ ಮನವರಿಕೆ ಮಾಡಲಾಗಿದೆ. ಲೀಡ್ ಬ್ಯಾಂಕ್‍ನಿಂದ ರಾಜ್ಯಮಟ್ಟದ ಬ್ಯಾಂಕಿಂಗ್ ಸಮಿತಿಗೆ ಈ ಬಗ್ಗೆ ಶಿಫಾರಸ್ಸು ಮಾಡಲಾಗಿದೆ. ಗೋಣಿಕೊಪ್ಪ ಎಪಿಎಂಸಿಯಲ್ಲಿ ಅಕ್ರಮ ಕರಿಮೆಣಸು ಆಮದುವಿನ ಬಗ್ಗೆ ಈಗಾಗಲೇ ಬೆಳೆಗಾರರ ಒಕ್ಕೂಟದಿಂದ ನ್ಯಾಯಾಂಗ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ಪುತ್ತರಿ ರೈತ ಸಂಘದ ಅಧ್ಯಕ್ಷ ಮನೆಯಪಂಡ ಸೋಮಯ್ಯ, ಒಕ್ಕೂಟದ ಮಾಜಿ ಕಾರ್ಯದರ್ಶಿ ಜಮ್ಮಡ ಮೋಹನ್ ಮಾದಪ್ಪ, ಸೇರಿದಂತೆ ಪ್ರಮುಖರು ಮಾತನಾಡಿದರು. ವೇದಿಕೆಯಲ್ಲಿ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ ಹಾಜರಿದ್ದರು.