ಗೋಣಿಕೊಪ್ಪ ವರದಿ, ಮಾ. 23: ಮಿತಬಳಕೆ ಮತ್ತು ಪ್ಲಾಸ್ಟಿಕ್ ವಸ್ತುಗಳ ಮರುಬಳಕೆ ಮಾಡುವದರಿಂದ ತ್ಯಾಜ್ಯ ಕಡಿಮೆಯಾಗಿ ಕಸ ವಿಲೇವಾರಿಗೆ ಸಹಕಾರಿಯಾಗಲಿದೆ ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಕುಶಾಲಪ್ಪ ಅಭಿಪ್ರಾಯಪಟ್ಟರು. ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕಾಫಿ ಮಂಡಳಿ ಮತ್ತು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನಡೆದ ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ವೀರಾಜಪೇಟೆ ಕಾಫಿ ಮಂಡಳಿ ಉಪ ನಿರ್ದೇಶಕ ಸತೀಶ್‍ಚಂದ್ರ ಮಾತನಾಡಿ, ಸಾರ್ವಜನಿಕ ಆಸ್ತಿಯ ಬಗ್ಗೆ ಪ್ರತಿಯೊಬ್ಬ ನಾಗರಿಕರಿಗೆ ಕಾಳಿಜಿ ಬಂದರೆ ಮಾತ್ರ ಸ್ವಚ್ಛ ಭಾರತದ ನಿರ್ಮಾಣ ಸಾಧ್ಯ ಎಂದರು. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಡೀನ್ ಡಾ. ಕುಶಾಲಪ್ಪ ಪ್ರತಿಜ್ಞಾ ವಿಧಿ ಬೋಧಿಸುವ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲುವಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡು ಬಸ್ ನಿಲ್ದಾಣದಿಂದ ಪೊನ್ನಂಪೇಟೆ ಜಂಕ್ಷನ್‍ವರೆಗೆ ಜಾಥಾ ನಡೆಸಿ ಅರಿವು ಮೂಡಿಸಿದರು. ಜಾಥಾದಲ್ಲಿ ವೃತ್ತ ನಿರೀಕ್ಷಕ ಕೆ.ಪಿ ಹರೀಶ್ಚಂದ್ರ ಕೈಜೋಡಿಸಿ ವಿದ್ಯಾರ್ಥಿಗಳಿಗೆ ಜೊತೆಯಾದರು. ಪಿಡಿಓ ಚಂದ್ರಮೌಳಿ, ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿ ಸಣ್ಣುವಂಡ ರಮೇಶ್, ಸಿಬ್ಬಂದಿ ಡಿ.ಸಿ. ವೆಂಕಟೇಶ್ ಹಾಗೂ ಗ್ರಾ.ಪಂ. ಸದಸ್ಯರುಗಳು ಇದ್ದರು.