ಮಡಿಕೇರಿ, ಮಾ. 23: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾ ಕಚೇರಿ ಸ್ತ್ರೀ ಶಕ್ತಿ ಒಕ್ಕೂಟದ ವತಿಯಿಂದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಸ್ತ್ರೀ ಶಕ್ತಿ ಗುಂಪುಗಳು ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಏರ್ಪಡಿಸಿದ್ದು, 100ಕ್ಕು ಹೆಚ್ಚು ಗುಂಪುಗಳು ಮೇಳದಲ್ಲಿ ಭಾಗವಹಿಸಿದ್ದವು.

ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನೆಯನ್ನು ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ನೆರವೇರಿಸಿದರು. ಸ್ತ್ರೀ ಶಕ್ತಿ ಗುಂಪಿನವರು ತರಬೇತಿಗಳನ್ನು ಪಡೆದು ಆರ್ಥಿಕವಾಗಿ ಸಬಲರಾಗಲು ಕಾವೇರಮ್ಮ ಕರೆ ನೀಡಿದರು. ತಾಲೂಕು ಪಂಚಾಯಿತಿಯಿಂದ ದೊರೆಯುವ ಟೈಲರಿಂಗ್ ತರಬೇತಿಯನ್ನು 18 ರಿಂದ 35 ವರ್ಷದ ಮಹಿಳೆಯರು ಪಡೆದುಕೊಳ್ಳ ಬಹುದೆಂದು ತಾ.ಪಂ. ಅಧ್ಯಕ್ಷರು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಪಿ. ಲಕ್ಷ್ಮಿ ಕಾರ್ಯ ನಿರ್ವಹಣಾಧಿಕಾರಿಗಳು ಇವರು ಪಂಚಾಯಿತಿಯಿಂದ ಸಿಗುವ ಸೌಲಭ್ಯಗಳನ್ನು ಸ್ತ್ರೀ ಶಕ್ತಿ ಗುಂಪಿನವರಿಗೆ ಒದಗಿಸಿಕೊಡುವದಾಗಿ ಭರವಸೆ ನೀಡಿದರು.

ಮಲ್ಲೇಸ್ವಾಮಿ ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಇಲಾಖೆ ಇವರು ಆದಾಯೋತ್ಪನ್ನ ಚಟುವಟಿಕೆಗಳಾದ ಚಾಕ್ ಪೀಸ್, ಪೆನಾಯಿಲ್, ಹೊಲಿಗೆ ತರಬೇತಿ ಯನ್ನು ಪಡೆದುಕೊಂಡಲ್ಲಿ ಶಿಕ್ಷಣ ಇಲಾಖೆ ಮೂಲಕ ಮಾರುಕಟ್ಟೆ ಸೌಲಭ್ಯವನ್ನು ಒದಗಿಸಿಕೊಡುವದಾಗಿ ತಿಳಿಸಿದರು. ಕಾವೇರಮ್ಮ ಸೋಮಣ್ಣ ಮಾತನಾಡಿ, ಆದಾಯೋತ್ಪನ್ನ ಚಟುವಟಿಕಗಳಲ್ಲಿ ಬದಲಾವಣೆ ಮಾಡಿಕೊಳ್ಳುವದರ ಮೂಲಕ ಆರ್ಥಿಕವಾಗಿ ಸಬಲರಾಗಲು ಕರೆ ನೀಡಿದರು. ಬೋಯಿಕೇರಿ ಸ್ತ್ರೀ ಶಕ್ತಿ ಗುಂಪಿನ ಪ್ರತಿನಿಧಿ ಸುಂದರಿ ಪ್ರಾರ್ಥಿಸಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ದಮಯಂತಿ ಸ್ವಾಗತಿಸಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಪ್ರಮಾಣ ವಚನವನ್ನು ಬೋಧಿಸಲಾಯಿತು.