*ಗೋಣಿಕೊಪ್ಪಲು, ಮಾ. 23 : ಐದು ವರ್ಷಗಳ ಹಿಂದೆ ಕಾಡಿನಲ್ಲಿ ಪುಂಡಾಟ ನಡೆಸಿ ಮಾನವನನ್ನು ಬಲಿ ಪಡೆದು ಭೀತಿಗೊಳಿಸಿದ ಆನೆ ತಿತಿಮತಿ ಮತ್ತಿಗೋಡು ಆನೆ ಶಿಬಿರದಲ್ಲಿ ಮೆತ್ತಗಾಗಿ ಜಾರ್ಖಂಡ್ ರಾಜ್ಯದ ಪಾಲಮೌ ಟೈಗರ್ ರಿಸರ್ವ್, ಮೆದಿನಿ ನಗರ, ಪಾಲಮೌ ಆನೆಗಳಿಗೆ ಸಂಯಮದ ಪಾಠ ಕಲಿಸಲು ತೆರಳಿದೆ.

2013ರಲ್ಲಿ ಹಾಸನ ಜಿಲ್ಲೆಯ ಹಾಲೂರಿನ ಅರಣ್ಯ ಪ್ರದೇಶದಲ್ಲಿ ಪುಂಡಾಟ ನಡೆಸುತ್ತಾ ಮಾನವನನ್ನು ಬಲಿ ತೆಗೆದುಕೊಂಡ 24 ವರ್ಷದ ಆನೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿದು ತಿತಿಮತಿ ಮತ್ತಿಗೋಡು ಆನೆ ಶಿಬಿರದಲ್ಲಿ ನಿರ್ಮಿಸಿದ ಕ್ರಾಲ್‍ನಲ್ಲಿ ಒಂದು ವರ್ಷಗಳ ಕಾಲ ಬಂದಿಸಿ ಸಂಯಮದ ಪಾಠ ಕಲಿಸಲಾಗಿತ್ತು.

ಮಾವುತರ ಪಾಠಕ್ಕೆ ಪಳಗಿದ ಆನೆಗೆ ಕಾಲಭೈರವ ಎಂಬ ನಾಮಕರಣವನ್ನು ಅರಣ್ಯಾಧಿಕಾರಿಗಳು ಮಾಡಿದರು. ಇದೀಗ ತಾನು ಕಲಿತ ಪಾಠವನ್ನು ತನ್ನ ಗೆಳೆಯರಿಗೆ ಹೇಳಿಕೊಡಲು ಜಾರ್ಖಂಡ್ ರಾಜ್ಯಕ್ಕೆ ತೆರಳಿದೆ. ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ನಾಗರಹೊಳೆ ವನ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತುರಾಜ್ ಮುಂದಾಳತ್ವದಲ್ಲಿ ಮತ್ತಿಗೋಡು ವಲಯ ಅರಣ್ಯಾಧಿಕಾರಿ ಕಿರಣ್ ಅವರ ನೇತೃತ್ವದಲ್ಲಿ ಆನೆಯನ್ನು ಲಾರಿಯ ಮೂಲಕ ಬೀಳ್ಕೊಡಲಾಯಿತು. ಆನೆಯ ಪಾಲನೆಗೆ ಮಾವುತ ಮಂಜು ಹಾಗು ಕಾವಾಡಿ ಮಹದೇವು ಸಹ ಒಂದು ತಿಂಗಳವರೆಗೆ ಆನೆಯನ್ನು ನಿಯಂತ್ರಿಸಲು ಆನೆಯೊಂದಿಗೆ ತೆರಳಿದ್ದಾರೆ. ಈ ಸಂದರ್ಭ ಮತ್ತಿಗೋಡು ಆನೆ ಶಿಭಿರದಲ್ಲಿದ್ದ ಆನೆಗಳು ತನ್ನ ಸ್ನೇಹಿತ ತಮ್ಮನ್ನು ಬಿಟ್ಟು ಬೇರೆ ರಾಜ್ಯಕ್ಕೆ ತೆರೆಳುತ್ತಿದ್ದಾನೆ ಎಂಬ ಮೂಕ ವೇದನೆಯಿಂದ ಘಟನೆಯನ್ನು ವೀಕ್ಷಿಸಿಸುತ್ತಿದ್ದವು. ಆನೆ ಪಳಗಿಸುವ ಮಾವುತರು, ಕಾವಾಡಿಗಳ ಕುಟುಂಬದವರು ಸಹ ಕಾಲಬೈರವನ ಪ್ರವಾಸಕ್ಕೆ ಬೀಳ್ಕೊಟ್ಟರು.

-ಚಿತ್ರವರದಿ : ದಿನೇಶ್. ಎನ್.ಎನ್