ವೀರಾಜಪೇಟೆ: ಮುಂದೆ ನಿರಾಶೆ ಹೊಂದುವದರಿಂದ ತಪ್ಪಿಸಿಕೊಳ್ಳಲು ಜೀವನದಲ್ಲಿ ಎರಡು-ಮೂರು ಗುರಿ ಹೊಂದಿಕೊಂಡು ಸಾಧನೆ ಮಾಡಬೇಕು. ಇದರಿಂದ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಹೇಳಿದರು.

ವೀರಾಜಪೇಟೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅನಂತಶಯನ ಅವರು ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ದಿನಕ್ಕೊಂದು ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಏಕೈಕ ಗುರಿ ಇಟ್ಟುಕೊಂಡು ಇಂತಹದನ್ನೇ ಸಾಧಿಸುತ್ತೇವೆ ಅಂದು ಕೊಂಡರೆ ಅದರಿಂದ ನಿರಾಸೆ ಹೆಚ್ಚಾಗಬಹುದು. ಬಣ್ಣದ ಬದುಕಿಗೆ ನಾವು ಎಷ್ಟು ಒತ್ತು ನೀಡುತ್ತೇವೆ ಅದೇ ರೀತಿ ನಾವು ಮುಟ್ಟುವ ಗುರಿಗೂ ಒತ್ತು ನೀಡಬೇಕು. ಉದ್ಯೋಗಕ್ಕಾಗಿ ವಿದ್ಯಾಭ್ಯಾಸ ಮಾಡದೆ ಜೀವನ ನಿರ್ವಹಣೆಗಾಗಿ ವಿದ್ಯಾಭ್ಯಾಸ ಮಾಡುವಂತಾಗಬೇಕು. ಪಾರ್ಕ್ ಹಾಗೂ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಕಳ್ಳರಿದ್ದಾರೆ, ದರೋಡೆ ಕೋರರಿದ್ದಾರೆ ಎಂಬ ನಾಮಫಲಕವನ್ನು ಹಾಕಿರುತ್ತಾರೆ. ಅದೇ ನಾಮಫಲಕವನ್ನು ವಿಧಾನಸೌದದ ಮುಂದೆ ಹಾಕುವ ಪರಿಸ್ಥಿತಿ ಇಂದು ಎದುರಾಗಿದೆ ಎಂದು ಹೇಳಿದರು.

ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಮಾತನಾಡಿ, ಜೀವನದಲ್ಲಿ ಬದ್ಧತೆ ಮತ್ತು ಶಿಸ್ತು ಅವಶ್ಯಕ ಎಂದರು. ಬಾಹ್ಯ ಆಕರ್ಷಣೆಗಳಿಂದ ವಿಚಲಿತರಾಗದೆ ಗುರಿ ಮುಟ್ಟಲು ತವಕ ತರುಣರಲ್ಲಿ ಬೇಕು ಎಂದರು. ಕ್ರೀಡಾ ಸಂಚಾಲಕಿ ಪ್ರೊ. ರಾಖಿ ಪೂವಣ್ಣ, ಸಾಂಸ್ಕøತಿಕ ಸಮಿತಿ ಸಂಚಾಲಕಿ ಸುನೀತಾ ಉಪಸ್ಥಿತರಿದ್ದರು. ರಾಜ್ಯ ಶಾಸ್ತ್ರ ವಿಭಾಗದ ವನಿತ್ ಕುಮಾರ್ ಸ್ವಾಗತಿಸಿದರು.

ಶಾರದ ಪೂಜೆ ಕಾರ್ಯಕ್ರಮ

ಒಡೆಯನಪುರ: ಸಮೀಪದ ಗೋಪಾಲಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಶಾರದ ಪೂಜಾ ಕಾರ್ಯಕ್ರಮ’ವನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭ 7ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಎಸ್‍ಡಿಎಂಸಿ ಅಧ್ಯಕ್ಷ ವಿ.ಎನ್. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಟಿ.ಕೆ. ಅಪ್ಪಸ್ವಾಮಿ, ಶಿಕ್ಷಕರು ಮತ್ತು ಎಸ್‍ಡಿಎಂಸಿ ಸದಸ್ಯರುಗಳು ಹಾಜರಿದ್ದರು.

ಕಠಿಣ ಪರಿಶ್ರಮದಿಂದ ಉನ್ನತಿ: ಶೋಭಾ

ನಾಪೋಕ್ಲು: ಶಿಸ್ತು ಮತ್ತು ಕಠಿಣ ಪರಿಶ್ರಮದಿಂದ ಜೀವನದಲ್ಲಿ ಉನ್ನತಿ ಹೊಂದಲು ಸಾಧ್ಯ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಹೇಳಿದರು. ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 2017-18ರ ಸಾಲಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಮುರಳಿ ಕರುಂಬಮ್ಮಯ್ಯ ಕೊಡವ ಸಮಾಜದ ಅಧ್ಯಕ್ಷರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರೂ ಆದ ಬಿದ್ದಾಟಂಡ ರಮೇಶ್ ಚಂಗಪ್ಪ ಮಾತನಾಡಿದರು. ಕಾಲೇಜಿನ ಪ್ರಬಾರ ಪ್ರಾಂಶುಪಾಲೆ ಡಾ. ಕಾವೇರಿ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢಶಾಲೆಯ ಉಪಪ್ರಾಂಶುಪಾಲೆ ಬಡ್ಡೀರ ನಳಿನಿ, ಪ್ರಾಧ್ಯಾಪಕರಾದ ಮನೋಜ್ ಕುಮಾರ್, ಬಿ.ಎಸ್. ವಿನೋದ್, ವಿದ್ಯಾರ್ಥಿ ಸಮಿತಿ ಉಪಾಧ್ಯಕ್ಷ ಆಶಿಕ್, ಕಾರ್ಯದರ್ಶಿ ಆರಿಫ, ಸಾಂಸ್ಕøತಿಕ ಕಾರ್ಯದರ್ಶಿ ಇಸ್ಮಾಯಿಲ್, ನಬೀಸಾ, ಕ್ರೀಡಾ ಕಾರ್ಯದರ್ಶಿ ಮೋಹನ್ ಕುಮಾರ್, ಚೇತನ್ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕಿ ಶ್ಯಾಮಲಾ ನಿರೂಪಿಸಿ, ಈ ಸಾಲಿನ ವರದಿ ವಾಚಿಸಿದರು. ಸಹಾಯಕ ಪ್ರಾಧ್ಯಾಪಕ ಮುದ್ದಪ್ಪ ವಂದಿಸಿದರು.ಅಂತರ ಕಾಲೇಜು ಕ್ರೀಡಾಕೂಟ

ಕುಶಾಲನಗರ: ಕ್ರೀಡಾ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ದೈಹಿಕ ಹಾಗೂ ಮಾನಸಿಕವಾಗಿ ಸದೃಢರನ್ನಾಗಿಸಲು ಸಾಧ್ಯ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ. ಸಿ. ಕೃಷ್ಣ ಹೇಳಿದರು. ಚಿಕ್ಕ ಅಳುವಾರದಲ್ಲಿನ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ಅಂತರ ಕಾಲೇಜು ಪುರುಷರ ಕಬಡ್ಡಿ ಹಾಗೂ ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾವಳಿಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಮೂಲಕ ಪ್ರತಿಭೆಗಳನ್ನು ಹೊರತರುವ ಹಾಗೂ ಆರ್ಥಿಕವಾಗಿ ಅವರುಗಳನ್ನು ಸಬಲೀಕರಣಗೊಳಿಸುವ ಕೆಲಸ ನಡೆಯುತ್ತಿರುವದು ಶ್ಲಾಘನೀಯ ಎಂದರು. ಮಂಗಳೂರು ವಿಶ್ವವಿದ್ಯಾ ನಿಲಯದ ಕುಲಸಚಿವ ಪ್ರೊ. ನಾಗೇಂದ್ರ ಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಂಗಳೂರು ವಿಶ್ವ ವಿದ್ಯಾನಿಲಯ ಕ್ರೀಡೆಗಳಿಗೆ ಉತ್ತೇಜನ ನೀಡುವ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಕ್ರೀಡಾಜಗತ್ತಿಗೆ ಪರಿಚಯಿಸುವ ಕೆಲಸವನ್ನು ಮಾಡುತ್ತಿದೆ ಎಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮಡಿಕೇರಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಕ್ರೀಡಾಧಿಕಾರಿ ಎಸ್.ಟಿ. ವೆಂಕಟೇಶ ಹಾಗೂ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ಪಿ.ಎಲ್. ಧರ್ಮ ಮಾತನಾಡಿದರು. ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಡಾ. ಟಿ. ಕೇಶವಮೂರ್ತಿ ಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನಾಡಿದರು. ಸೂಕ್ಷ್ಮಾಣುಜೀವ ವಿಜ್ಞಾನ ವಿಭಾಗದ ಮುಖ್ಯಸ್ಥೆ ಪ್ರೊ. ಕೆ.ಸಿ. ಪುಷ್ಪಲತಾ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ. ಕೆ.ಕೆ. ಧರ್ಮಪ್ಪ, ಎಸ್‍ಸಿ/ಎಸ್‍ಟಿ ವಿದ್ಯಾರ್ಥಿ ಸೆಲ್‍ನ ಸಂಚಾಲಕ ಡಾ. ರಾಜ್‍ಕುಮಾರ್ ಎಸ್. ಮೇಟಿ, ವಿವಿಧ ವಿಭಾಗಗಳ ಉಪನ್ಯಾಸಕರು, ಭೋದಕೇತರ ವರ್ಗ, ಸೇರಿದಂತೆ ಮೈಸೂರು ಹಾಗೂ ಹಾಸನ ಜಿಲ್ಲೆಗಳ ಪದವಿ ಕಾಲೇಜುಗಳ ದೈಹಿಕ ನಿರ್ದೇಶಕರು ಹಾಗೂ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿನಿ ಕೆ.ಎ. ಸೌಮ್ಯ ಹಾಗೂ ಕ್ರೀಡಾ ಕಾರ್ಯದರ್ಶಿ ವಿದ್ಯಾ ವಂದಿಸಿದರು.

ರಂಗ ವೇದಿಕೆ ಉದ್ಘಾಟನೆ

ಗೋಣಿಕೊಪ್ಪಲು: ತಿತಿಮತಿ ಸ.ಪಾ.ಶಾಲೆಯಲ್ಲಿ ಸುಮಾರು ರೂ. 5 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ರಂಗ ವೇದಿಕೆಯನ್ನು ಜಿ.ಪಂ. ಸದಸ್ಯೆ ಪಂಕಜ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಜಿ. ಪಂ.ರೂ. 2 ಲಕ್ಷ ಹಾಗೂ ಗ್ರಾ.ಪಂ. ರೂ. 3 ಲಕ್ಷ ವೆಚ್ಚದಲ್ಲಿ ರಂಗ ವೇದಿಕೆ ನಿರ್ಮಾಣ ಮಾಡಲಾಗಿದ್ದು. ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಇದು ಉಪಯೋಗ ವಾಗಲಿದೆ ಎಂದರು. ಶಾಲಾಭಿವೃದ್ಧಿ ಸಹಕರಿಸುತ್ತಿರುವ ಜಿ.ಪಂ. ಸದಸ್ಯೆ ಪಂಕಜ, ತಾ.ಪಂ. ಸದಸ್ಯೆ ಆಶಾ ಜೇಮ್ಸ್, ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ, ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಹರೀಶ್ ಬೋಪಣ್ಣ, ತಾ.ಪಂ. ಸದಸ್ಯೆ ಆಶಾ ಜೇಮ್ಸ್, ಗ್ರಾ.ಪಂ. ಉಪಾಧ್ಯಕ್ಷೆ ರಶಿ, ಎಸ್‍ಡಿಎಂಸಿ ಅಧ್ಯಕ್ಷ ಅಫ್ರೋಜ್, ಶಾಲಾ ಮುಖ್ಯ ಶಿಕ್ಷಕಿ ಪಾರ್ವತಿ, ದಾನಿ ಚೆಪ್ಪುಡೀರ ಕಾರ್ಯಪ್ಪ, ಗ್ರಾ.ಪಂ. ಸದಸ್ಯರು ಇದ್ದರು.

ಪ್ರಿಯಾ ಉತ್ತಯ್ಯಗೆ ಪಿ.ಎಚ್.ಡಿ. ಪದವಿ

ವೀರಾಜಪೇಟೆ: ಮೂಲತ: ವೀರಾಜಪೇಟೆ ಚಿಕ್ಕಪೇಟೆಯ ನಿವಾಸಿಯಾಗಿದ್ದು ಮೈಸೂರಿನಲ್ಲಿ ನೆಲೆಸಿರುವ ಇಟ್ಟೀರ ಉತ್ತಯ್ಯ ಮೋಹನಾಂಗಿ ದಂಪತಿಯ ಪುತ್ರಿ ಪ್ರಿಯಾ ಉತ್ತಯ್ಯ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಪಿ.ಎಚ್.ಡಿ. ಪದವಿ ನೀಡಿ ಗೌರವಿಸಿದೆ. ಪ್ರಿಯಾ ಉತ್ತಯ್ಯ ಅವರು “ದಿ ಪಾಲಿಟಿಕ್ಸ್ ಆಫ್ ಇಂಟರ್‍ಸೆಕ್ಷನಾಲಿಟಿ ಇನ್ ದಿ ಸೆಲೆಕ್ಟ್ ನಾವೆಲ್ಸ್ ಆಫ್ ಅನಿತಾರಾವು ಬಾದಾಮಿ ಅಂಡ್ ಚಿತ್ರಾ ಬ್ಯಾನರ್ಜಿ ದಿವಕರುಣಿ” ಎಂಬ ಮಹಾ ಪ್ರಬಂಧಕ್ಕೆ ವಿಶ್ವ ವಿದ್ಯಾಲಯದ ಕುಲಸಚಿವ ಪ್ರೊ. ಜೆ. ಸೋಮಶೇಖರ್ (ಪರೀಕ್ಷಾಂಗ) ಅವರು ಇತ್ತೀಚೆಗೆ ನಡೆದ ಘಟಿಕೋತ್ಸವದಲ್ಲಿ ಪಿಎಚ್‍ಡಿ ಪದವಿ ನೀಡಿದರು.ಶಾಲೆಗೆ ಕೊಡುಗೆ

ಮಡಿಕೇರಿ: ಹುದಿಕೇರಿ ಸ.ಮಾ.ಪ್ರಾ.ಶಾಲೆಯ ನಲಿ-ಕಲಿ ತರಗತಿಗೆ ಗುಪ್ತ ಜ್ಯುವೆಲ್ಲರಿ ದಾವಣಗೆರೆಯ ಆರ್.ಹೆಚ್. ರಾಧಕೃಷ್ಣ ಇವರು ಎಂಟು ಸಾವಿರದ ಐದು ನೂರು ರೂಪಾಯಿಗಳ ಜಮಖಾನ ಗಳನ್ನು ಉದಾರವಾಗಿ ನೀಡಿದ್ದಾರೆ.

ಅತ್ತೂರು ಶಾಲೆಗೆ ಕೊಡುಗೆ

ಮಡಿಕೇರಿ: ಪಾಲಿಬೆಟ್ಟ ಸಮೀಪದ ಅತ್ತೂರು (ಗದ್ದೆಮನೆ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಟಾಟಾ ಕಾಫಿ ಸಂಸ್ಥೆಯು ರೂ. 5 ಸಾವಿರ ಬೆಲೆಬಾಳುವ ಮೂರು ಹೊಸ ಕಸದ ಬುಟ್ಟಿಗಳನ್ನು ಉಚಿತವಾಗಿ ನೀಡಿದ್ದಾರೆ.

ಟಾಟಾ ಸಂಸ್ಥೆಯ ಆರೋಗ್ಯ ವಿಭಾಗದ ಸಿಬ್ಬಂದಿ ತುಳಸಿ ಮಾಲ, ಶಾಲೆಯ ಮುಖ್ಯೋಪಾಧ್ಯಾಯಿನಿ ಮಾಲತಿ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಧನ

ಕೂಡಿಗೆ: ಕೆನರಾ ಬ್ಯಾಂಕ್ ವತಿಯಿಂದ ಕೂಡುಮಂಗಳೂರು ಮತ್ತು ಕೂಡಿಗೆ ಗ್ರಾ. ಪಂ. ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರಿಗೆ ಸಹಾಯ ಧನ ವಿತರಣೆ ಮಾಡಲಾಯಿತು. ಕೂಡಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರಿಗೆ ರೂ. 2500, ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ರೂ. 5000 ಸಹಾಯ ಧನವನ್ನು ನೀಡಿದರು. ಕೆನರಾ ಬ್ಯಾಂಕಿನ ವ್ಯವಸ್ಥಾಪಕಿ ಲೀಲಾವತಿ, ಸಿಬ್ಬಂದಿಗಳಾದ ನಿಖೇಶ್, ವಿಶ್ವಕಾಂತನ್, ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ಕೆ.ಟಿ. ವೆಂಕಟೇಶ್, ಶಾಲಾ ಮುಖ್ಯ ಶಿಕ್ಷಕಿ ವಾಣಿ, ಸಹಶಿಕ್ಷಕ ವೃಂದ ಇದ್ದರು.