ಸೋಮವಾರಪೇಟೆ, ಮಾ. 23: ಕೊಡಗಿನ ಜೀವನದಿ ಕಾವೇರಿ ಕಲುಷಿತಗೊಂಡಿದ್ದು, ಶೇ. 80 ರಷ್ಟು ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಸಂಶೋಧಕರು ವರದಿ ಸಲ್ಲಿಸಿದ್ದಾರೆ. ಈ ಬಗ್ಗೆ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ ಎಂದು ತಾ.ಪಂ. ಉಪಾಧ್ಯಕ್ಷ ಹಾಗೂ ಕಾಫಿ ಮಂಡಳಿ ಸದಸ್ಯ ಎಂ.ಬಿ. ಅಭಿಮನ್ಯು ಕುಮಾರ್ ಹೇಳಿದರು.

ಸೋಮವಾರಪೇಟೆ ಕಾಫಿ ಮಂಡಳಿ, ಜಿ.ಪಂ. ಸ್ವಚ್ಛ ಭಾರತ್ ಮಿಷನ್ ಆಶ್ರಯದಲ್ಲಿ ಇಲ್ಲಿನ ಮಹಿಳಾ ಸಮಾಜದಲ್ಲಿ ನಡೆದ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯ ವೈಜ್ಞಾನಿಕ ಮಾಹಿತಿ ಕಾರ್ಯಾ ಗಾರದಲ್ಲಿ ಅವರು ಮಾತನಾಡಿದರು.

ಅವೈಜ್ಞಾನಿಕ ಕಸ ವಿಲೇವಾರಿ ಪದ್ಧತಿಯಿಂದ ಪರಿಸರ ಮಾಲಿನ್ಯವಾಗುತ್ತಿದ್ದು, ಕೆಲ ಕಾಫಿ ಬೆಳೆಗಾರರು ಕಾಫಿ ಪಲ್ಪಿಂಗ್‍ನ ಕಲುಷಿತ ನೀರನ್ನು ನದಿ-ತೊರೆಗಳಿಗೆ ಬಿಡುತ್ತಿದ್ದರೂ ಸಹ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಯವರು ಕ್ರಮಕೈಗೊಳ್ಳುತ್ತಿಲ್ಲ. ಯಾವದೇ ಜಾಗೃತಿ ಸಭೆಗಳನ್ನು ನಡೆಸುತ್ತಿಲ್ಲ. ಇಂತಹ ಇಲಾಖೆಯ ಬೇಜವಾಬ್ದಾರಿ ನೀತಿಯಿಂದ ನೀರು ಕಲುಷಿತ ಗೊಂಡಿದೆ ಎಂದು ದೂರಿದರು.

ನದಿ ದಂಡೆ, ಕೆರೆ ಪ್ರದೇಶಗಳಲ್ಲಿ ಮಾಂಸ, ಮೀನು ಅಂಗಡಿಗಳು ಇರುವದರಿಂದ ತ್ಯಾಜ್ಯಗಳು ಕುಡಿಯುವ ನೀರಿನ ಮೂಲ ಸೇರುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಕ್ರಮಕೈಗೊಳ್ಳಬೇಕು ಎಂದರು.

ಸ್ವಚ್ಛ ಭಾರತ್ ಮಿಷನ್‍ನ ಸಂಪನ್ಮೂಲ ವ್ಯಕ್ತಿ ಸೂರಜ್ ಮಾತನಾಡಿ, ಪ್ಲಾಸ್ಟಿಕ್‍ಅನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಅಂಗವಿಕಲ ಮಕ್ಕಳು ಹುಟ್ಟುತ್ತಾರೆ. ಪ್ಲಾಸ್ಟಿಕ್ ಸುಟ್ಟರೆ ರಾಸಾಯನಿಕಗಳು ಮನುಷ್ಯನ ಶರೀರಕ್ಕೆ ಸೇರಿ ಶ್ವಾಸಕೋಶ ಸಂಬಂಧಿತ ಕಾಯಿಲೆ ಹಾಗೂ ಕ್ಯಾನ್ಸರ್‍ಗೆ ತುತ್ತಾಗ ಬೇಕಾಗುತ್ತದೆ. ಪ್ಲಾಸ್ಟಿಕ್‍ಅನ್ನು ಹೂತರೆ ಕ್ರಮೇಣ ಅಂತರ್ಜಲವನ್ನು ಕುಗ್ಗಿಸುತ್ತದೆ. ಈ ಕಾರಣದಿಂದ ಪ್ರತಿಯೊಬ್ಬರು ಪ್ಲಾಸ್ಟಿಕ್ ತ್ಯಜಿಸಬೇಕು ಎಂದರು.

ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಕಾಫಿ ಮಂಡಳಿ ಉಪನಿರ್ದೇಶಕ ರಾಮಗೌಂಡರ್, ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ, ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ. ಚಿಟ್ಟಿಯಪ್ಪ, ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿ ಮುರುಳೀಧರ್ ಮತ್ತಿತರರು ಇದ್ದರು. ಕಾರ್ಯಕ್ರಮದಲ್ಲಿ ತಾಲೂಕಿನ ಕಾಫಿ ಬೆಳೆಗಾರರು ಭಾಗವಹಿಸಿದ್ದರು.