ಸೋಮವಾರಪೇಟೆ, ಮಾ. 23: ಬೇಳೂರು ಗ್ರಾ.ಪಂ.ನ ಬಜೆಗುಂಡಿ ಗ್ರಾಮದಲ್ಲಿ ಬಿಜೆಪಿ ಬಲವರ್ಧನೆ ಸಹಿಸದ ಕಾಂಗ್ರೆಸ್‍ನಿಂದ ಕೀಳುಮಟ್ಟದ ರಾಜಕಾರಣ ನಡೆಯುತ್ತಿದೆ.

ಗ್ರಾ.ಪಂ. ಸದಸ್ಯ ಹಾಗೂ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಯಾಕೂಬ್ ಅವರು ಗ್ರಾಮವನ್ನು ಮರೆತಿದ್ದಾರೆ ಎಂದು ಬಜೆಗುಂಡಿ ಬಿಜೆಪಿ ಬೂತ್ ಕಮಿಟಿ ಹಾಗೂ ಪಾಂಚಜನ್ಯ ಯುವ ಸೇನೆ ಅಧ್ಯಕ್ಷ ಬಿ.ಜಿ. ಪ್ರಶಾಂತ್ ತಿರುಗೇಟು ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‍ಇಪಿ ಮತ್ತು ಟಿಎಸ್‍ಪಿ ಯೋಜನೆಯಡಿ ಶಾಸಕರ ಮುತುವರ್ಜಿಯಿಂದ ಬಜೆಗುಂಡಿಗೆ ರೂ. 21 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ನಿರ್ಮಿಸಲಾಗಿದೆ. ಬಜೆಗುಂಡಿಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿ ಬಾವುಟಗಳನ್ನು ಅಳವಡಿಸಲಾಗಿದೆ ಎಂದು ಯಾಕೂಬ್ ಅವರು ಅಜ್ಞಾನದ ಹೇಳಿಕೆ ನೀಡಿದ್ದಾರೆ ಎಂದರು.

ಬಜೆಗುಂಡಿ ಬೂತ್ ಬಿಜೆಪಿ ಸಮಾವೇಶಕ್ಕಾಗಿ ಬಿಜೆಪಿ ಕಾರ್ಯಕರ್ತರ ಮನೆಯ ಮುಂಭಾಗ ಬಾವುಟಗಳನ್ನು ಅಳವಡಿಸಲಾಗಿತ್ತೇ ವಿನಃ ಉದ್ಘಾಟನಾ ಕಾರ್ಯಕ್ರಮಕ್ಕಲ್ಲ.

ಇದರೊಂದಿಗೆ ಡಿಸಿಸಿ ಬ್ಯಾಂಕ್ ಮತ್ತು ಪಾಂಚಜನ್ಯ ಯುವ ಸೇನೆಯ ವತಿಯಿಂದ ಆಯೋಜಿಸಿದ್ದ ಶೂನ್ಯ ಬಡ್ಡಿದರದ ಸಾಲದ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲೂ ಪಕ್ಷದ ಧ್ವಜ ಬಳಸಿಲ್ಲ. ಬಿಜೆಪಿ ಬೂತ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತ್ರ ಧ್ವಜ ಬಳಸಲಾಗಿದೆ ಎಂದು ಅವರು ಹೇಳಿದರು. ಇವರ ಕುಟುಂಬದ ನಾಲ್ವರು ಕುಶಾಲನಗರ ಮತ್ತು ಬಜೆಗುಂಡಿಯಲ್ಲೂ ಓಟರ್ ಐ.ಡಿ. ಪಡೆದಿದ್ದಾರೆ.

ಎರಡು ಕಡೆಗಳಲ್ಲಿ ಮತದಾರರ ಗುರುತಿನ ಚೀಟಿ ಪಡೆಯುವದು ಕಾನೂನು ಬಾಹಿರ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲಧಿಕಾರಿಗಳಿಗೆ ದೂರು ನೀಡಲಾಗುವದು ಎಂದು ದಾಖಲೆ ಪತ್ರಗಳನ್ನು ಗೋಷ್ಠಿಯಲ್ಲಿ ಪ್ರದರ್ಶಿಸಿದರು.

ಗೋಷ್ಠಿಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಸಂತೋಷ್ ಕುಮಾರ್, ಬಿಜೆಪಿ ಬೂತ್ ಸಮಿತಿ ಪದಾಧಿಕಾರಿಗಳಾದ ರವೀಂದ್ರ, ಬಿ.ಎಂ. ಪ್ರಶಾಂತ್, ಲತಾ ಅವರುಗಳು ಉಪಸ್ಥಿತರಿದ್ದರು.