ಮಡಿಕೇರಿ, ಮಾ. 23: ನಾಪೆÇೀಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರೊಬ್ಬರು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅಡ್ಡಿಯನ್ನುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ನಾಪೋಕ್ಲು ಬಿಜೆಪಿ ಸ್ಥಾನೀಯ ಸಮಿತಿ, ನಿಯಮ ಮೀರಿ ವರ್ತಿಸಿದರೆ ಗ್ರಾಮಸ್ಥರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಥಳೀಯ ಜಿ.ಪಂ. ಸದಸ್ಯ ಮುರಳಿ ಕರುಂಬಮ್ಮಯ್ಯ, ಗ್ರಾ.ಪಂ ಅಧ್ಯಕ್ಷ ಇಸ್ಮಾಯಿಲ್ ಮತ್ತು ಸದಸ್ಯ ಖುರೇಷಿ ಅವರ ಧೋರಣೆಯನ್ನು ಖಂಡಿಸಿ ಬಿಜೆಪಿ ಇತ್ತೀಚೆಗೆ ಪ್ರತಿಭಟನೆ ನಡೆಸಿದೆಯೇ ಹೊರತು, ಮನೆ ಕಟ್ಟಲು ಅಥವಾ ಕಟ್ಟಡ ಕಟ್ಟಲು ಅನುಮತಿ ನೀಡುವ ವಿಷಯಕ್ಕಲ್ಲವೆಂದು ಸ್ಪಷ್ಟಪಡಿಸಿದರು. ಕಟ್ಟಡ ಗುತ್ತಿಗೆ ಕಾಮಗಾರಿಯನ್ನು ತಮಗೆ ನೀಡುವಂತೆ ಹಾಗೂ ಕಟ್ಟಡ ನಿರ್ಮಾಣದ ಸಾಮಗ್ರಿ ಗಳನ್ನು ತಮ್ಮಿಂದಲೇ ಪಡೆದು ಕೊಳ್ಳುವಂತೆ ಒತ್ತಡ ಹಾಕುತ್ತಿರುವದನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಕಟ್ಟಡ ನಿರ್ಮಾಣದ ದಾಖಲೆ, ಭೂ ಪರಿವರ್ತನೆ ಮೊದಲಾದ ವಿಚಾರಗಳ ಬಗ್ಗೆ ಹೋರಾಟ ನಡೆದಿರಲಿಲ್ಲವೆಂದು ಮುರುಳಿ ಸ್ಪಷ್ಟಪಡಿಸಿದರು. ನಾಪೋಕ್ಲು ನಿವಾಸಿ ಅಶ್ರಫ್ ಮಾತನಾಡಿ, ತಾನು ನಾಪೋಕ್ಲುವಿನ ಬೇತು ರಸ್ತೆಯಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸುತ್ತಿದ್ದು, ಅಗತ್ಯ ದಾಖಲೆಗಳನ್ನು ಹೊಂದಿದ್ದೇನೆ. ಕಟ್ಟಡದ ಕಾಂಕ್ರಿಟ್ ಕಾಮಗಾರಿ ಹಂತದಲ್ಲಿ ಯಾವದೇ ನೋಟೀಸ್ ನೀಡದೆ ಕೆಲಸ ಸ್ಥಗಿತಗೊಳಿಸುವಂತೆ ಸೂಚಿಸಿದ್ದ ಬಗ್ಗೆ ಮಾಹಿತಿ ನೀಡಿದರು. ಗ್ರಾ.ಪಂ. ಸದಸ್ಯ ಶಿವಚಾಳಿಯಂಡ ಜಗದೀಶ್ ಮಾತನಾಡಿ, ಪಂಚಾಯಿತಿ ಆಡಳಿತ ಮಂಡಳಿಯ ಧೋರಣೆಗಳಿಂದ ಪಂಚಾಯಿತಿ ಸದಸ್ಯರನ್ನು ಸಾರ್ವಜನಿಕವಾಗಿ ತುಚ್ಛವಾಗಿ ಕಾಣುವ ಸ್ಥಿತಿ ನಿರ್ಮಾಣ ವಾಗಿದೆ. ಆಡಳಿತ ನಡೆಸುವವರು ತಮ್ಮ ಇತಿಮಿತಿಯನ್ನು ಅರಿತು ಕಾರ್ಯ ನಿರ್ವಹಿಸುವದು ಅಗತ್ಯವೆಂದರು.

ಗೋಷ್ಠಿಯಲ್ಲಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಅಂಬಿ ಕಾರ್ಯಪ್ಪ ಹಾಗೂ ಕನ್ನಂಬಿರ ಸುಧಿ ತಿಮ್ಮಯ್ಯ ಉಪಸ್ಥಿತರಿದ್ದರು.