ಸಿದ್ದಾಪುರ, ಮಾ. 23: ಗ್ರಾಮ ಪಂಚಾಯಿತಿ ಸದಸ್ಯೆಯೋರ್ವರು ಶಾಲಾ ಮೈದಾನದಲ್ಲಿ ಗುಡಿಸಲು ನಿರ್ಮಾಣ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂಬ ಆರೋಪದಡಿಯಲ್ಲಿ ಎರಡು ಗುಂಪುಗಳ ನಡುವೆ ರಾತ್ರಿ ಹೊಡೆದಾಟ ನಡೆದಿರುವ ಘಟನೆ ಪೊಲೀಸ್ ಠಾಣಾ ಮೆಟ್ಟಿಲೇರಿದೆ.
ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲ ಗ್ರಾಮದ ಹುಂಡಿ ಗ್ರಾಮದ ಸರ್ಕಾರಿ ಶಾಲೆಯ ಮೈದಾನದ ಬಳಿ ಗುರುವಾರ ರಾತ್ರಿ ಐದಾರು ಕುಟುಂಬಸ್ಥರು ಸೇರಿ ಗುಡಿಸಲು ನಿರ್ಮಿಸಿದ್ದಾರೆ. 5 ಗುಡಿಸಲು ನಿರ್ಮಾಣ ಮಾಡಿದ ವಿಚಾರ ತಿಳಿದು ಹುಂಡಿಯ ಗ್ರಾಮಸ್ಥರು ಅಲ್ಲಿಗೆ ತೆರಳಿ, ಗುಡಿಸಲು ನಿರ್ಮಾಣ ಮಾಡಿದ ವ್ಯಕ್ತಿಗಳೊಂದಿಗೆ ವಿಚಾರಿಸಿದಾಗ ಮಾಲ್ದಾರೆ ಗ್ರಾ.ಪಂ. ಸದಸ್ಯೆಯೋರ್ವರು ಹಾಗೂ ಸಂಘಟನೆಯೊಂದರ ಸದಸ್ಯರು ಗುಡಿಸಲು ನಿರ್ಮಿಸುವಂತೆ ತಿಳಿಸಿದ್ದಾಗಿ ತಿಳಿದು ಬಂದಿದೆ. ಈ ವಿಚಾರದಲ್ಲಿ ಗ್ರಾ.ಪಂ. ಸದಸ್ಯೆ ಹಾಗೂ ಗ್ರಾಮಸ್ಥರ ನಡುವೆ ರಾತ್ರಿ ಸಮಯದಲ್ಲಿ ಪರಸ್ಪರ ಹೊಡೆದಾಟ, ಕಲ್ಲುತೂರಾಟ ನಡೆದಿದ್ದು, ಎರಡು ಗುಂಪುಗಳ ಸದಸ್ಯರುಗಳು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗುಡಿಸಲು ತೆರವು ವಿಚಾರದಲ್ಲಿ ನಡೆದ ಹೊಡೆದಾಟ ಗ್ರಾಮದಲ್ಲಿ ಚರ್ಚೆಗೆ ಗ್ರಾಸವಾಯಿತ್ತಲ್ಲದೇ ಸರ್ಕಾರಿ ಜಾಗದಲ್ಲಿ ಯಾರ ಅನುಮತಿ ಪಡೆದು ಮನೆ ನಿರ್ಮಿಸಿದರು ಎಂದು ಗ್ರಾಮಸ್ಥರು ಪ್ರಶ್ನಿಸಿದರು. ನನ್ನ ಮೇಲೆ ಹಲ್ಲೆ ನಡೆಸಿದರು ಎಂದು ಗ್ರಾ.ಪಂ. ಸದಸ್ಯೆ ದೂರು ನೀಡಿದರು. ಕೊನೆಗೆ ಠಾಣೆಯಲ್ಲಿ ಇತ್ಯರ್ಥ ಪಡಿಸಲಾಯಿತ್ತು. - ವಾಸು