ಗೋಣಿಕೊಪ್ಪ ವರದಿ, ಮಾ. 23 : ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಭವಿಷ್ಯದ ಸುಸ್ಥಿರತೆಗಾಗಿ ಮರ ಸಂಪನ್ಮೂಲಗಳ ಸೃಷ್ಟಿ ಸಂರಕ್ಷಣೆ ನಿರ್ವಹಣೆ ಮತ್ತು ಬಳಕೆಯಲ್ಲಿ ಇತ್ತೀಚಿನ ಆವಿಷ್ಕಾರಗಳ ಕುರಿತಾದ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ನಡೆಯಿತು. ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಅರಣ್ಯ ಸಚಿವ ವಿಜಯಶಂಕರ್ ಒಂದೆಡೆ ಯುವಜನತೆ ಕೃಷಿಯಿಂದ ದೂರ ಸರಿಯುತ್ತ್ತಿದ್ದಾರೆ ಮತ್ತೊಂಡೆದೆ ಪ್ರಸ್ತುತ ಅನುಸರಿಸುತ್ತಿರುವ ಕೃಷಿ ಪದ್ಧತಿಗಳು ಅಯಾ ಪ್ರದೇಶಗಳಿಗೆ ಪೂರಕವಾಗಿಲ್ಲ. ಸಾವಿರಾರು ವರ್ಷಗಳಿಂದ ಯಥೇಚ್ಚವಾಗಿ ಹರಿಯುತ್ತಿದ್ದ ನದಿ ನೀರು ಇಂದು ಬತ್ತಿ ಹೋಗುವ ಹಂತಕ್ಕೆ ಮಾನವನ ಚಟುವಟಿಕೆಗಳು ಪರಿಸರದ ಮೇಲೆ ಪರಿಣಾಮ ಬೀರಿದೆ. ಕೃಷಿ ಹಾಗೂ ಅರಣ್ಯವನ್ನು ಕಡೆಗಣಿಸಿ ಆರ್ಥಿಕವಾಗಿ ಲಾಭದಾಯಕವಾದ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಅರಣ್ಯ ಸಂಪತ್ತನ್ನು ನಾಶದ ಅಂಚಿಗೆ ತಂದಿದ್ದಾರೆ ಎಂದು ಹೇಳಿದರು.
ಶಿವಮೊಗ್ಗ ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನಾ ವಿಭಾಗದ ನಿರ್ದೇಶಕ ಎಂ.ಕೆ ನಾಯಕ್ ಮಾತನಾಡಿ ವನ್ಯ ಸಂಪತ್ತನ್ನು ವಿವಿಧ ರೀತಿಯಲ್ಲಿ ಬಳಕೆ ಮಾಡಿಕೊಂಡು ಸಂರಕ್ಷಣೆ ವಿಷಯದಲ್ಲಿ ಹಿಂದೆ ಸರಿದ ಪರಿಣಾಮ ಹವಾಮಾನದಲ್ಲಿ ಬದಲಾವಣೆಯಾಗಿರುವದನ್ನು ಗಮನಿಸಬಹುದು. ಮುಂಬರುವ ದಿನಗಳಲ್ಲಿ ಆಹಾರ ಪದಾರ್ಥಗಳ ಹೆಚ್ಚಳವಾಗಿ ಆಹಾರ ಭದ್ರತೆ ವಿಶ್ವದಾದ್ಯಂತ ಮಹತ್ವ ಪಡೆಯಲಿದೆ ಎಂದರು.
ಸಮ್ಮೇಳನದಲ್ಲಿ ರಾಷ್ಟ್ರದ ವಿವಿಧ ಅರಣ್ಯ ಮಹಾವಿದ್ಯಾಲಯಗಳ 70 ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಿವಮೊಗ್ಗ ಕೃಷಿ ವಿಶ್ವವಿದ್ಯಾನಿಲದ ಉಪಕುಲಪತಿ ನಾರಾಯಣ ಸ್ವಾಮಿ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಸಿ.ಜಿ ಕುಶಾಲಪ್ಪ, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ. ರಾಮಕೃಷ್ಣ ಹೆಗಡೆ, ಐಟಿಸಿ ಸಂಸ್ಥೆಯ ಪ್ರಾಂತೀಯ ವ್ಯವಸ್ಥಾಪಕ ಗಿರೀಶ್ ಮೋಹನ್ ಇದ್ದರು.