ಮಡಿಕೇರಿ, ಮಾ. 23: ಪ್ರಸ್ತುತ ಸಮಾಜ ಸಾಕಷ್ಟು ಸುಶಿಕ್ಷಿತ ವಾಗಿದ್ದರೂ ನಿರುದ್ಯೋಗ ಸಮಸ್ಯೆ ಎಲ್ಲೆಡೆ ಕಾಡುತ್ತಿದೆ ಎಂದು ಮಾಜಿ ಕಾನೂನು ಸಚಿವ ಯಂ.ಸಿ. ನಾಣಯ್ಯ ಆತಂಕ ವ್ಯಕ್ತಪಡಿಸಿದರು. ಇಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಪ್ರತಿಭೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ 50 ರಷ್ಟು ಯುವ ಜನಾಂಗದವರಿದ್ದು, ಅವರಲ್ಲಿ ಬಹುತೇಕರು ತಾವು ಪಡೆದ ವಿದ್ಯೆಗೆ ಸೂಕ್ತ ಉದ್ಯೋಗವಿಲ್ಲದೆ ನಿರುದ್ಯೋಗದಿಂದ ಬಳಲುತ್ತಿದ್ದಾರೆ ಎಂದು ವಿಷಾದಿಸಿದರು.
ರಾಜಕೀಯ ಪಕ್ಷಗಳು ತಮ್ಮ ಹಿತಾಸಕ್ತಿಗಾಗಿ ವಿದ್ಯಾರ್ಥಿಗಳನ್ನು ಪ್ರತಿಭಟನೆಗೆ ಬಳಸಿಕೊಂಡು ಅವರ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿರುವ ಬೆಳವಣಿಗೆ ನಡೆಯುತ್ತಿದ್ದು, ಇದನ್ನು ವಿದ್ಯಾರ್ಥಿಗಳು ಸೂಕ್ಷ್ಮವಾಗಿ ಗಮನಿಸಿ ಎಚ್ಚೆತ್ತುಕೊಳ್ಳಬೇಕು ಎಂದು ಕಿವಿಮಾತು ಹೇಳಿದ ನಾಣಯ್ಯ, ವಿದ್ಯಾರ್ಥಿಗಳಿಗೆ ಸ್ಥಳೀಯ, ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರ್ರಾಷ್ಟ್ರೀಯ ರಾಜಕೀಯ ಬೆಳವಣಿಗೆಯ ಬಗ್ಗೆ ಜ್ಞಾನ ಇರಬೇಕಷ್ಟೇ ಹೊರತು ಅದರಲ್ಲಿ ತೊಡಗಿಸಿಕೊಂಡು ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳ ಬಾರದು ಎಂದರು. ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಕಾಲೇಜಿನ ವಾರ್ಷಿಕ ವರದಿ ಮಂಡಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಬಿ.ಎಸ್. ನಾಗೇಂದ್ರ ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿಂದಿ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ಹೆಗಡೆ, ವಿದ್ಯಾರ್ಥಿ ಪ್ರಮುಖರುಗಳಾದ ಲೋಹಿತ್, ಜನನಿ, ತೃಪ್ತಿ, ಜಂಟಿ ಕಾರ್ಯದರ್ಶಿ ಸ್ವಪ್ನ, ಕ್ರೀಡಾ ಕಾರ್ಯದರ್ಶಿ, ಕಿರಣ್, ಅರುಣ್ ಕುಮಾರ್, ನೀಲಮ್ಮ, ಅಹಲ್ಯ ಅಪ್ಪಚ್ಚು, ಸುಭಾಶ್ ವೇದಿಕೆಯಲ್ಲಿ ಉಪಸ್ಥಿತ ರಿದ್ದರು. ಬೋಧಕ ಬೋಧಕೇತರ ಸಿಬ್ಬಂಧಿಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರತಿಭೋತ್ಸವ ನಿನ್ನೆ ದಿನ ನಡೆದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಸೌರಭ ಕಲಾ ಪರಿಷತ್ತು ನಿರ್ದೇಶಕಿ ಡಾ. ಶ್ರೀವಿದ್ಯಾ ಮುರಳೀಧರ್ ಪಾಲ್ಗೊಂಡಿದ್ದರು.