ಜೇಸೀ ಸಂಸ್ಥೆಯಿಂದ ಮಹಿಳಾ ದಿನಾಚರಣೆ

ಸೋಮವಾರಪೇಟೆ: ಇಲ್ಲಿನ ಪುಷ್ಪಗಿರಿ ಜೇಸೀ ಸಂಸ್ಥೆಯ ವತಿಯಿಂದ ಸ್ಥಳೀಯ ಮಹಿಳಾ ಸಮಾಜದಲ್ಲಿ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ತಾ.ಪಂ. ಸದಸ್ಯೆ ಹೆಚ್.ಎನ್. ತಂಗಮ್ಮ ಅವರು, ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಸಾಧಕರ ಪಟ್ಟಿಯಲ್ಲಿಯೂ ಇಂದು ಮಹಿಳೆಯರ ಹೆಸರನ್ನು ಕಾಣಬಹುದಾಗಿದೆ. ಆದರೂ ಹಲವಷ್ಟು ಮಹಿಳೆಯರು ಶಿಕ್ಷಿತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿದೆ ಎಂದರು.

ಜೇಸೀ ಪೂರ್ವ ವಲಯಾಧ್ಯಕ್ಷೆ ಮಮತ ಮಾತನಾಡಿ, ಮಹಿಳೆಯರು ದೇಶ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವದು ಶ್ಲಾಘನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜೇಸೀ ಸಂಸ್ಥೆಯ ಅಧ್ಯಕ್ಷ ಕೆ.ಎ. ಪ್ರಕಾಶ್ ಮಾತನಾಡಿ, ಮಹಿಳೆಯರಿಗೆ ಸಮಾಜದಲ್ಲಿ ಪೂಜ್ಯ ಭಾವನೆಯಿದ್ದರೂ ಮಹಿಳಾ ದೌರ್ಜನ್ಯಗಳಿಗೆ ಕಡಿವಾಣ ಬಿದ್ದಿಲ್ಲ. ಮಹಿಳೆಯರು ಇನ್ನಷ್ಟು ಸಂಘಟಿತರಾಗುವ ಮೂಲಕ ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಬೇಕು ಎಂದರು.

ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ವೈ. ಪ್ರಕಾಶ್, ಮೇಲ್ವಿಚಾರಕ ರಮೇಶ್, ಒಕ್ಕೂಟದ ಅಧ್ಯಕ್ಷೆ ನಾಗಮ್ಮ ಉಪಸ್ಥಿತರಿದ್ದರು. ಮಹಿಳಾ ದಿನಾಚರಣೆ ಅಂಗವಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಡಿ. ದರ್ಜೆ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಸಿ.ಎಂ. ನಂಜಿ ಅವರಿಗೆ ‘ಉತ್ತಮ ಸೇವಾ ಪುರಸ್ಕಾರ’ ನೀಡಿ ಸನ್ಮಾನಿಸಲಾಯಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ. ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಜೇಸೀ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜೇಸೀ ಕಾರ್ಯದರ್ಶಿ ಎಂ.ಎ. ರುಬೀನಾ ಕಾರ್ಯಕ್ರಮ ನಿರ್ವಹಿಸಿದರು.