ಮೂರ್ನಾಡು, ಮಾ. 22 : ಮೂರ್ನಾಡು ಲಯನ್ಸ್ ಕ್ಲಬ್, ಮಂಗಳೂರು ಎ.ಬಿ. ಶೆಟ್ಟಿ ದಂತ ವೈದ್ಯಕೀಯ ಕಾಲೇಜು ಹಾಗೂ ಮೂರ್ನಾಡು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಿತು.

ಸ್ಥಳೀಯ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸ ಲಾದ ಶಿಬಿರವನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಅಮ್ಮಾಟ್ಟಂಡ ಚಂಗಪ್ಪ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೂರ್ನಾಡಿನ ದಂತ ವೈದ್ಯ ಡಾ. ಸುಭಾಷ್ ನಾಣಯ್ಯ ಮಾತನಾಡಿ, ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳು ವದರಿಂದ ಜನ ಸಾಮಾನ್ಯರಿಗೆ ಪ್ರಯೋಜನ ಉಂಟಾಗುತ್ತಿದೆ. ಆಗ್ಗಿಂದ್ದಾಗೆ ಇಂತಹ ಶಿಬಿರಗಳು ಗ್ರಾಮಗಳಲ್ಲಿ ನಡೆಯು ವಂತಾಗಬೇಕು; ಅನೇಕ ಶಿಬಿರಗಳಲ್ಲಿ ಆರೋಗ್ಯ ತಪಾಸಣೆ ಮಾತ್ರ ನಡೆಸಲಾಗುತ್ತದೆ. ಇಲ್ಲಿ ಆಯೋಜಿಸಿ ರುವ ಶಿಬಿರದಲ್ಲಿ ತಪಾಸಣೆ ಹಾಗೂ ಚಿಕಿತ್ಸೆ ಲಭ್ಯವಿರುವದು ನಿಜಕ್ಕೂ ಸಂತೋಷದ ವಿಚಾರ ಎಂದು ಹರ್ಷ ವ್ಯಕ್ತ ಪಡಿಸಿದರು.

ಮೂರ್ನಾಡು ಲಯನ್ಸ್ ಕ್ಲಬ್ ಕಾರ್ಯದರ್ಶಿ ಬಿದ್ದಂಡ ಗಗನ್ ಮುತ್ತಣ್ಣ, ಖಜಾಂಚಿ ಪಳಂಗಂಡ ಕಾವೇರಪ್ಪ, ಮೂರ್ನಾಡು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಯಶಸ್ವಿನಿ, ದಂತ ವೈದ್ಯೆ ಡಾ. ಬಡುವಂಡ ಧೃತಿ ಅಪ್ಪಚ್ಚು, ಮಧುಮೇಹ ತಜ್ಞೆ ಡಾ. ನಿರ್ಮಲ, ಲಯನ್ಸ್ ಕ್ಲಬ್ ಸದಸ್ಯರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಶಿಬಿರದಲ್ಲಿ ದಂತ, ಮೂಳೆ, ಸೀಳು ತುಟಿ ಇನ್ನಿತರ ಆರೋಗ್ಯ ಸಮಸ್ಯೆಗಳ ಕುರಿತು 15 ಮಂದಿ ವೈದ್ಯರ ತಂಡ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು. ಗ್ರಾಮದ 86 ಮಂದಿ ಆರೋಗ್ಯ ತಪಾಸಣೆ ನಡೆಸಿ ಉಚಿತ ಚಿಕಿತ್ಸೆಯ ಪ್ರಯೋಜನ ಪಡೆದುಕೊಂಡರು.