ಮಡಿಕೇರಿ, ಮಾ. 22 : ತಮ್ಮ ಅಧಿಕಾರದ ಅವಧಿಯಲ್ಲಿ ಯಾವದೇ ಕಪ್ಪು ಚುಕ್ಕೆ ಅಂಟಿಸಿಕೊಳ್ಳದ ಶಾಸಕದ್ವಯರಾದ ಕೆ.ಜಿ. ಬೋಪಯ್ಯ ಹಾಗೂ ಎಂಪಿ.ಅಪ್ಪಚ್ಚು ರಂಜನ್ ಅವರುಗಳಿಗೆ ಈ ಬಾರಿಯ ಬಿಜೆಪಿ ಟಿಕೆಟ್ ನೀಡದಿದ್ದಲ್ಲಿ ತಾವು ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ ಸ್ಪರ್ಧೆಗಿಳಿಯುವದಾಗಿ ಚೆಟ್ಟಳ್ಳ್ಳಿ ಜನಪರ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವೇಳೆ ಇಬ್ಬರು ಹಾಲಿ ಶಾಸಕರುಗಳಿಗೆ ಬಿಜೆಪಿ ಟಿಕೆಟ್ ಸಿಗದಿದ್ದಲ್ಲಿ ಮತ್ತು ತಮಗೆ ಪಕ್ಷದ ಮೂಲಕ ಸ್ಪÀರ್ಧಿಸಲು ಅವಕಾಶ ನೀಡದೆ ಇದ್ದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವದಾಗಿ ಸ್ಪಷ್ಟಪಡಿಸಿದರು. ಹಿಂದುಗಳ ಮತ ತನ್ನ ಬೆಂಬಲಕ್ಕೆ ಇದೆಯೆಂದು ಅವರು ಇದೇ ಸಂದರ್ಭ ತಿಳಿಸಿದರು.

ಕಳಂಕವೇ ಇಲ್ಲದ ಜನಪ್ರತಿನಿಧಿಗಳನ್ನು ಬದಲಾಯಿಸಿದ ಉದಾಹರಣೆ ಎಲ್ಲೂ ಇಲ್ಲ. ಆದರೆ, ಕೊಡಗು ಜಿಲ್ಲೆಯಲ್ಲಿ ಈ ರೀತಿಯ ಬೆಳವಣಿಗೆ ಎದುರಾದರೆ, ತನ್ನ ಸ್ಪರ್ಧೆ ಖಚಿತವೆಂದು ಮಣಿ ಉತ್ತಪ್ಪ ತಿಳಿಸಿದರು.

ಆರ್‍ಎಸ್‍ಎಸ್ ಮತ್ತು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾದ ತನ್ನನ್ನು ಪಕ್ಷದೊಳಗೆ ಕಡೆಗಣಿಸಿದ ಪ್ರಸಂಗವೂ ನಡೆದಿದೆ. ಆದರೆ, ತಾನು ಬೇಸರಗೊಳ್ಳದೆ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ್ದೇನೆ ಮತ್ತು ದೇವಾಲಯಗಳಲ್ಲಿ ಉರುಳು ಸೇವೆ ಮಾಡಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧಿಸುವದು ಮತ್ತು ಗೆಲ್ಲುವದು ಸುಲಭದ ಮಾತಲ್ಲ. ಆದ್ದರಿಂದ ಇಬ್ಬರು ಹಾಲಿ ಶಾಸಕರಿಗೆ ಟಿಕೆಟ್ ನೀಡಬೇಕೆಂದು ಮಣಿ ಉತ್ತಪ್ಪ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಖಜಾಂಚಿ ಧನಂಜಯ ಉಪಸ್ಥಿತರಿದ್ದರು.

ಆರ್‍ಎಸ್‍ಎಸ್ ಕುರಿತು : ಮುಂದುವರಿದು ಮಾತನಾಡಿದ ಬಲ್ಲಾರಂಡ ಮಣಿ ಉತ್ತಪ್ಪ ಅವರು ಕೊಡಗಿನಲ್ಲಿ ಆರ್‍ಎಸ್‍ಎಸ್ ಶಾಖೆಗಳೇ ನಡೆಯುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಟಿಕೆಟ್ ನೀಡುವವರು ನಾವೇ ಎಂದು ಹೇಳಿಕೊಂಡರೆ ಸಾಲದು. ಟಿಕೆಟ್ ನೀಡಿದ ಮೇಲೆ ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸವನ್ನು ಕೂಡ ಮಾಡಬೇಕು. ನಾನು ಆರ್‍ಎಸ್‍ಎಸ್, ಭಜರಂಗದಳ, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ಎಂದು ಹೇಳಿಕೊಂಡು ಮನೆಯಲ್ಲಿ ಕುಳಿತರೆ ಸಾಲದು. ಸಂಘಟನೆಯ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಒತ್ತಾಯಿಸಿದರು.