ಮಡಿಕೇರಿ, ಮಾ.22 : ವಿಶ್ವ ಆರೋಗ್ಯ ಸಂಸ್ಥೆಯು 2030ರ ವೇಳೆಗೆ ಕ್ಷಯ ರೋಗವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಪ್ರತಿ ವರ್ಷ ಕ್ಷಯ ರೋಗ ಮುಕ್ತ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಮಾರ್ಚ್ 24 ರಂದು ‘ನಾಯಕರು ಬೇಕಾಗಿದ್ದಾರೆ, ಕ್ಷಯ ರೋಗ ಮುಕ್ತ ವಿಶ್ವ ನಿರ್ಮಾಣಕ್ಕೆ’ ಘೋಷ ವಾಕ್ಯದೊಂದಿಗೆ ಚಿಕಿತ್ಸೆ ನಡೆಯಲಿದೆಯೆಂದು ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಎ.ಸಿ.ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 2025ನೇ ಸಾಲಿಗೆ ಕ್ಷಯ ರೋಗ ಮುಕ್ತ ಭಾರತವನ್ನಾಗಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದರು.
ಕೊಡಗು ಜಿಲ್ಲೆಯಲ್ಲಿ 2017 ಡಿಸೆಂಬರ್ ಅಂತ್ಯದವರೆಗೆ ಸುಮಾರು 5896 ರೋಗಿಗಳನ್ನು ಗುರುತಿಸಿ ಚಿಕಿತ್ಸೆ ನೀಡಲಾಗಿದೆ. ಶೇಕಡ 87 ಕ್ಕಿಂತಲು ಹೆಚ್ಚು ರೋಗಿಗಳು ಗುಣಮುಖ ರಾಗಿದ್ದಾರೆ ಮತ್ತು ಶೇಕಡಾ 5 ರಷ್ಟು ರೋಗಿಗಳು ಮರಣ ಹೊಂದಿದ್ದು, ಶೇ. 5 ರಷ್ಟು ರೋಗಿಗಳು ಚಿಕಿತ್ಸೆ ನಿರಾಕರಿಸಿದ್ದಾರೆ ಎಂದರು.
2017ನೇ ಸಾಲಿನಲ್ಲಿ ಒಟ್ಟು 412 ಕ್ಷಯರೋಗಿಗಳನ್ನು ಪತ್ತೆ ಹಚ್ಚಿ ಎಲ್ಲಾ ರೋಗಿಗಳಿಗೆ ಆರ್.ಎನ್.ಟಿ.ಸಿ.ಪಿ ಚಿಕಿತ್ಸೆ ನೀಡಲಾಗಿದೆ. ಇವರಲ್ಲಿ 32 ಕ್ಷಯ ರೋಗಿಗಳಿಗೆ ಹೆಚ್.ಐ.ವಿ ಸೋಂಕು ಇದ್ದು, ಎಲ್ಲಾ ರೋಗಿಗಳಿಗೆ ಸಿ.ಪಿ.ಟಿ. ಮತ್ತು ಏ.ಆರ್.ಟಿ. ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 2016 ರಲ್ಲಿ ಚಿಕಿತ್ಸೆಗೆ ನೊಂದಣಿಯಾದ ಕ್ಷಯರೋಗಿಗಳಲ್ಲಿ ಶೇ. 87 ರಷ್ಟು ಮಂದಿ ಕ್ಷಯರೋಗÀ ಮುಕ್ತರಾಗಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 15 ಎಂ.ಡಿ.ಆರ್. ಕ್ಷಯ ರೋಗಿಗಳನ್ನು ಪತ್ತೆ ಹಚ್ಚಿದ್ದು, 5 ಎಂ.ಡಿ.ಆರ್. ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. 6 ರೋಗಿಗಳು ಮರಣ ಹೊಂದಿದ್ದಾರೆ. 3 ಎಂ.ಡಿ.ಆರ್ ಕ್ಷಯ ರೋಗಿಗಳು ಚಿಕಿತ್ಸೆ ಪೂರ್ಣಗೊಂಡು ಗುಣಮುಖರಾಗಿದ್ದು, ಒಬ್ಬ ಎಂ.ಡಿ.ಆರ್. ಕ್ಷಯ ರೋಗಿಯನ್ನು ಚಿಕಿತ್ಸೆಗಾಗಿ ಮೈಸೂರು ಜಿಲ್ಲೆಗೆ ವರ್ಗಾಯಿಸಲಾಗಿದೆ. ಜಿಲ್ಲೆಗೆ 2017ನೇ ಸಾಲಿನಲ್ಲಿ ಸಿ.ಬಿ.ನ್ಯಾಟ್ ಮಂಜೂರಾಗಿದ್ದು, ಯಂತ್ರವನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ತಾ. 24 ರಂದು ಬೆಳಿಗ್ಗೆ 9.30ಕ್ಕೆ ಬಾಲಭವನದ ಬಳಿಯಿಂದ ಆರಂಭಗೊಳ್ಳುವ ಕ್ಷಯ ರೋಗ ಜಾಗೃತಿ ಜಾಥಾಕ್ಕೆ ಚಾಲನೆ ನೀಡುವ ಸಂದರ್ಭ ಜಿಲ್ಲಾಧಿಕಾರಿಗಳಾದ ಪಿ.ಐ. ಶ್ರೀವಿದ್ಯಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ , ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಬಾರ ಡೀನ್ ಡಾ. ಕೆ.ಬಿ. ಕಾರ್ಯಪ್ಪ, ಜಿಲ್ಲಾ ಸರ್ಜನ್ ಡಾ. ಕೆ. ಜಗದೀಶ್ ಮತ್ತಿತರ ಪ್ರಮುಖರು ಹಾಜರಿರುವರು.
ಬೆಳಿಗ್ಗೆ 10.30ಕ್ಕೆ ಕಾವೇರಿ ಕಲಾ ಕ್ಷೇತ್ರದಲ್ಲಿ ನಡೆಯುವ ಸಭಾ ಕಾರ್ಯಕ್ರಮವÀನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಉದ್ಘಾಟಿಸಲಿದ್ದು, ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅಧ್ಯಕ್ಷತೆ ವಹಿಸಲಿದ್ದಾರೆಂದು ಡಾ. ಶಿವಕುಮಾರ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮೆಡಿಕಲ್ ಕಾಲೇಜಿನ ಡಾ. ರಾಮಚಂದ್ರ ಕಾಮತ್ ಉಪಸ್ಥಿತರಿದ್ದರು.
ಹಾಡಿಗಳಲ್ಲಿ ಹೆಚ್ಐವಿ : ವೀರಾಜಪೇಟೆ ತಾಲೂಕಿನ ಗೋಣಿಕೊಪ್ಪ ವ್ಯಾಪ್ತಿಯ ಗಿರಿಜನ ಹಾಡಿಗಳಲ್ಲಿ ಹೆಚ್ಐವಿ ಹಾಗೂ ಕ್ಷಯ ಸೋಂಕಿತರು ಪತ್ತೆಯಾಗುತ್ತಿದ್ದಾರೆ ಎಂದು ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಎ.ಸಿ. ಶಿವಕುಮಾರ್ ಆತಂಕಕಾರಿ ಮಾಹಿತಿ ನೀಡಿದ್ದಾರೆ. ಕೂಲಿ ಕಾರ್ಮಿಕರಾಗಿ ದುಡಿಯುವ ಗಿರಿಜನರು ಮದ್ಯಪಾನ ಮತ್ತು ಧೂಮಪಾನಕ್ಕೆ ದಾಸ ರಾಗುತ್ತಿದ್ದಾರೆ. ಗಿರಿಜನರನ್ನು ಕಾರ್ಮಿಕರನ್ನಾಗಿ ದುಡಿಸಿಕೊಳ್ಳುವ ಕೆಲವು ಮಾಲೀಕರು ಮದ್ಯವನ್ನು ನೀಡುತ್ತಿದ್ದಾರೆ. ಮದ್ಯದ ಅಮಲಿನಲ್ಲಿ ಅಕ್ರಮ ಮತ್ತು ಅನೈಸರ್ಗಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿರುವ ಮಂದಿ ಹೆಚ್ಐವಿ ಸೋಂಕು ಬಾಧಿತರಾಗುತ್ತಿದ್ದಾರೆ ಎಂದರು.