ಶನಿವಾರಸಂತೆ, ಮಾ. 22: ಕಾಫಿ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸ್ವಚ್ಛ ಭಾರತ್ ಮಿಷನ್ ಸಹಭಾಗಿತ್ವದಲ್ಲಿ ಗುರುವಾರ ಆಯೋಜಿಸಲಾಗಿದ್ದ ಘನ, ದ್ರವ ತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ಪ್ರಚಾರದ ಕೊರತೆಯಿಂದ ಖಾಲಿ ಕುರ್ಚಿಗಳ ಎದುರು ನಡೆಯಿತು...!
ಆಹ್ವಾನ ಪತ್ರಿಕೆ ಇಲ್ಲದೆ ಕಾರ್ಯಕ್ರಮ ನಡೆಯುವ 1 ಗಂಟೆ ಮೊದಲು ದೂರವಾಣಿ ಮೂಲಕ ಆಹ್ವಾನಿಸಲ್ಪಟ್ಟು, ಕಾರ್ಯಕ್ರಮ ಆಯೋಜಿಸಿದ್ದ ಸಭಾಂಗಣದಲ್ಲಿ ಖಾಲಿ ಕುರ್ಚಿಗಳ ನಡುವೆ ನಾಲ್ಕೈದು ಮಂದಿ ಸಾರ್ವಜನಿಕರು, ನಾಲ್ವರು ಮಾಧ್ಯಮದವರು ಮಾತ್ರ ಇದ್ದು, ಕಾಫಿ ಮಂಡಳಿಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಂತಿತ್ತು. ವೇದಿಕೆಯಲ್ಲಿದ್ದ ಅತಿಥಿಗಣ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯೆ ಹಾಗೂ ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಂಯೋಜಕಿ ಸರೋಜಮ್ಮ ಮಾತನಾಡಿ, ಜಿಲ್ಲಾಡಳಿತದಿಂದ ಧನ ಸಹಾಯ ಪಡೆದು ಗ್ರಾಮ ಪಂಚಾಯಿತಿಗಳ ಜನಪ್ರತಿನಿಧಿಗಳ ಸಹಭಾಗಿತ್ವದಲ್ಲಿ ರೈತರಿಗಾಗಿ, ಸಾರ್ವಜನಿಕವಾಗಿ, ಪ್ರಾಮಾಣಿಕವಾಗಿ, ಅದ್ಧೂರಿಯಾಗಿ ನಡೆಯಬೇಕಿದ್ದ ಕಾರ್ಯಕ್ರಮ ಆಹ್ವಾನ, ಪ್ರಚಾರದ ಕೊರತೆಯಿಂದ ಬೆರಳೆಣಿಕೆ ಮಂದಿಗೆ ನಡೆಯುವಂತಾಗಿದೆ. ಅಧಿಕಾರಿಗಳು ಬೇಜವಾಬ್ದಾರಿತನದಿಂದ ಕಾಟಾಚಾರಕ್ಕಾಗಿ ಮಾಡಿದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಬೆಳೆಗಾರರ ಸಂಘದ ಅಧ್ಯಕ್ಷ ಆರ್.ಪಿ. ಲಕ್ಷ್ಮಣ್ ಮಾತನಾಡಿ, ತ್ಯಾಜ್ಯ ವಿಲೇವಾರಿ ಇಡೀ ದೇಶದ ಗಂಭೀರ ಸಮಸ್ಯೆಯಾಗಿದ್ದು, ನಿವಾರಣೆಯಲ್ಲಿ ಪ್ರತಿ ನಾಗರಿಕನ ಪಾತ್ರವಿದೆ. ಜಿಲ್ಲಾಡಳಿತದೊಂದಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘ- ಸಂಸ್ಥೆಗಳು, ಸಾರ್ವಜನಿಕರು ಪ್ರತಿಯೊಬ್ಬರೂ ತ್ಯಾಜ್ಯ ನಿವಾರಣೆಯಲ್ಲಿ ಕೈಜೋಡಿಸಬೇಕಿದೆ ಎಂದರು.
ಭಾರತ ಕಾಫಿ ಮಂಡಳಿ ಮಾಜಿ ಸದಸ್ಯ ಕೆ.ವಿ. ಮಂಜುನಾಥ್ ಮಾತನಾಡಿ, ಘನ, ದ್ರವ ತ್ಯಾಜ್ಯ ಪ್ರಕೃತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಮನುಷ್ಯನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಿದ್ದ ಕಾರ್ಯಕ್ರಮ ಮಾಹಿತಿ ಕೊರತೆಯಿಂದ ನಾಲ್ಕೈದು ಜನರಿಗಾಗಿ ನಡೆಯುವಂತಾಗಿರುವದು ವಿಷಾದನೀಯ ಎಂದರು.
ಸೋಮವಾರಪೇಟೆ ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಎಚ್.ಆರ್. ಮುರಳೀಧರ್, ಮಡಿಕೇರಿ ಆಕಾಶವಾಣಿಯ ನಾಗರಾಜ್, ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಂಯೋಜಕ ಡಿ.ಡಿ. ಪೆಮ್ಮಯ್ಯ ಮಾತನಾಡಿದರು.
ಶನಿವಾರಸಂತೆ ಕಾಫಿ ಮಂಡಳಿಯ ಕಿರಿಯ ಸಂಪರ್ಕಾಧಿಕಾರಿ ವಿಶ್ವನಾಥ್, ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್, ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎನ್. ಸಂದೀಪ್ ಇತರರು ಉಪಸ್ಥಿತರಿದ್ದರು.