ಸೋಮವಾರಪೇಟೆ, ಮಾ. 22: ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಯಾದ ಪೋಸ್ಟನ್ನು ಶೇರ್ ಮಾಡಿರುವ ಆರೋಪದ ಮೇರೆ ಕಾಗಡಿಕಟ್ಟೆ ಗ್ರಾಮದ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ತನ್ನ ಆಸ್ತಿ ಘೋಷಣೆಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ತನ್ನ ವಿರುದ್ಧ ತಪ್ಪು ಅಭಿಪ್ರಾಯ ಮೂಡಿಸಲು ಯತ್ನಿಸಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಶಾಸಕ ಅಪ್ಪಚ್ಚು ರಂಜನ್ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಬಗ್ಗೆ ಕ್ರಮ ಕೈಗೊಂಡಿರುವ ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಎಂ. ಶಿವಣ್ಣ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ರವಾನಿಸಿದ ಕಾಗಡಿಕಟ್ಟೆ ಗ್ರಾಮದ ಇದ್ದು ಕುಂಞ ಅವರ ಪುತ್ರ, ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಕಾರ್ಯಕರ್ತ ಅಬ್ದುಲ್ ಹಮೀದ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ‘ತಾನು ಆ ಪೋಸ್ಟನ್ನು ಶೇರ್ ಮಾಡಿದ್ದೇನೆ’ ಎಂದು ಒಪ್ಪಿಕೊಂಡಿದ್ದು, ಆತನಿಂದ ಹೇಳಿಕೆ ಬರೆಸಿಕೊಂಡು, ಮುಂದಿನ ವಿಚಾರಣೆಗೆ ಹಾಜರಾಗು ವಂತೆ ಸೂಚಿಸಲಾಗಿದೆ ಎಂದು ಠಾಣಾಧಿಕಾರಿ ಮಾಹಿತಿ ನೀಡಿದ್ದಾರೆ.

ಶಾಸಕರು ನೀಡಿದ ದೂರಿನ ಮೇರೆ ತನಿಖೆ ಮುಂದುವರೆಸಿದ್ದು, ಆ ಪೋಸ್ಟ್‍ನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದವರ ಪತ್ತೆಗೆ ಕ್ರಮಕೈಗೊಳ್ಳಲಾಗು ವದು ಎಂದು ಠಾಣಾಧಿಕಾರಿ ಶಿವಣ್ಣ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ರಂಜನ್, 2008 ಮತ್ತು 2013ರ ವಿಧಾನ ಸಭಾ ಚುನಾವಣೆಯಲ್ಲಿ ಆಸ್ತಿಯ ವಿವರವನ್ನು ದೃಢೀಕರಿಸಿರುವದರಲ್ಲಿ ಯಾವದೇ ವ್ಯತ್ಯಾಸವಾಗಿಲ್ಲ. 2013ರ ಚುನಾವಣೆ ಸಂದರ್ಭದಲ್ಲಿ ಪ್ರಥಮ ಬಾರಿಗೆ ಅಸ್ತಿಯ ಅಂದಾಜು ಮೌಲ್ಯವನ್ನು ದೃಡೀಕರಿಸುವಂತೆ ನಿರ್ದೇಶನವಿತ್ತು. ಅದರಂತೆ ನನಗೆ 2008ರಲ್ಲಿ ಒಟ್ಟು 37.82 ಏಕರೆ, ಪತ್ನಿಯ ಹೆಸರಲ್ಲಿ 25 ಏಕರೆ ಸ್ಥಿರಾಸ್ತಿ ಇತ್ತು. ಅದೇ ಸ್ಥಿರಾಸ್ತಿ 2013ರಲ್ಲೂ ಇದೆ. ಇದರಲ್ಲಿ ಯಾವದೇ ವ್ಯತ್ಯಾಸವಾಗಿಲ್ಲ. ಘೋಷಣಾ ಪತ್ರದಲ್ಲಿ ಬರೀ ಮೌಲ್ಯ ಬರೆದಿದ್ದರಿಂದ ತಪ್ಪಾಗಿ ಅರ್ಥೈಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡಲಾಗುತ್ತಿದೆ. ಈ ಹಿನ್ನೆಲೆ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.