ಮಡಿಕೇರಿ ಮಾರ್ಚ್ 22 - ಕಾಳುಮೆಣಸು ಆಮದನ್ನು ಬಿಗಿಗೊಳಿಸುವ ದೃಷ್ಟಿಯಿಂದ ಕಾಳುಮೆಣಸು ಆಮದು ಸಂಬಂಧಿತ ಕೇಂದ್ರ ಸರಕಾರ ಮತ್ತೊಂದು ಕಠಿಣ ಕ್ರಮ ಕೈಗೊಂಡಿದೆ. ತಾ. 21 ರಂದು ಹೊಸ ಆದೇಶದ ಮುಖಾಂತರ ರೂ. 500ಕ್ಕಿಂತ ಕಡಿಮೆ ಬೆಲೆಯ ಕಾಳುಮೆಣಸು ಆಮದನ್ನು ಮುಕ್ತ ವಹಿವಾಟಿನಿಂದ ನಿಷೇಧ ವರ್ಗೀಕರಣವಾಗಿ ಪರಿಗಣಿಸಲಾಗಿದೆ.ಇದರಿಂದ ಇನ್ನು ಮುಂದೆ ಯಾವದೇ ರೀತಿಯಿಂದಲೂ ಕಾಳುಮೆಣಸನ್ನು ರೂ. 500 ಕ್ಕಿಂತ ಕಡಿಮೆ ಆಮದು ಮಾಡುವ ಹಾಗಿಲ್ಲ. ಇದು ಕಾಳುಮೆಣಸು ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.ಈ ಹಿಂದೆ ಕೇಂದ್ರ ಸರಕಾರ ಕಾಳು ಮೆಣಸು ಆಮದಿಗೆ ಕನಿಷ್ಟ ದರವಾಗಿ ರೂ. 500 ನಿಗದಿಪಡಿಸಿ ಆದೇಶ ಹೊರಡಿಸಿತ್ತು. ಆದರೆ ವ್ಯಾಪಾರಿಗಳು ಸಾಪ್ತಾ ಒಪ್ಪಂದದಲ್ಲಿರುವ ಮತ್ತೊಂದು ಮಾರ್ಗದ ಮೂಲಕ
ಕಡಿಮೆ ದರಕ್ಕೆ ಕಾಳು ಮೆಣಸು ಆಮದು ಮಾಡಲು ಆರಂಭಿಸಿರುವುದರಿಂದ ಒಮ್ಮೆ ಚೇತರಿಕೆ ಕಂಡ ಕಾಳುಮೆಣಸಿನ ದರ ಮತ್ತೆ ಕುಸಿದಿತ್ತು. .
ಕಾಳು ಮೆಣಸು ಬೆಳೆಗಾರರ ಸಂಸ್ಥೆಗಳ ಸಮನ್ವಯ ಸಮಿತಿ ಮತ್ತೆ ವಾಣಿಜ್ಯ ಸಚಿವರು, ವಿತ್ತ ಸಚಿವಾಲಯವನ್ನು ಸಂಪರ್ಕಿಸಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಕೋರಿದ ಮೇರೆಗೆ ಕೇಂದ್ರ ಸರಕಾರ ತಕ್ಷಣ ಕಾಳುಮೆಣಸು ಆಮದಿನ ಮೇಲೆ ಮತ್ತೊಂದು ಬಿಗಿಯಾದ ಕ್ರಮ ಕೈಗೊಂಡಿದೆ.
ಈಗ ಮತ್ತೆ ಕಾಳುಮೆಣಸಿನ ದರ ಆಶಾದಾಯಕವಾಗಲಿದೆ ಎಂದು ಕಾಳುಮೆಣಸು ಸಮನ್ವಯ ಸಮಿತಿ ಸಂಚಾಲಕ ಕೊಂಕೋಡಿ ಪದ್ಮನಾಭ ಮತ್ತು ಸಂಯೋಜಕ ಕೆ. ಕೆ. ವಿಶ್ವನಾಥ್ ಪತ್ರಿಕಾ ಹೇಳಿಕೆಯಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.
ಕಾಳುಮೆಣಸು ಕೃಷಿಕರ ಪರವಾಗಿ ಕ್ರಮ ಕೈಗೊಂಡಿರುವ ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರನ್ನು ಸಮನ್ವಯ ಸಮಿತಿ ಪರವಾಗಿ ಅಭಿನಂದಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.