ಶ್ರೀಮಂಗಲ, ಮಾ. 22 : ಈ ದೇಶದ ಅಲ್ಪಸಂಖ್ಯಾತರಾಗಿರುವ ಕೊಡವ ಜನಾಂಗವನ್ನು ಧಾರ್ಮಿಕ ಅಲ್ಪಸಂಖ್ಯಾತರೆಂದು ಘೋಷಿಸಿ ಸೂಕ್ತ ಸ್ಥಾನಮಾನ ನೀಡುವದರೊಂದಿಗೆ ಜನಗಣತಿಯಲ್ಲಿ ಪ್ರತ್ಯೇಕ ಕೋಡ್ ನೀಡಬೇಕೆಂದು ಯುನೈಟೆಡ್ ಕೊಡವ ಆರ್ಗನೈಸೇಷನ್ (ಯುಕೊ) ಸರ್ಕಾರವನ್ನು ಒತ್ತಾಯಿಸಿದೆ.
ಈ ಬಗ್ಗೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಸಂಚಾಲಕ ಕೊಕ್ಕೆಲೆಮಾಡ ಮಂಜುಚಿಣ್ಣಪ್ಪ ಅವರು ಕೇವಲ 2 ಲಕ್ಷ 10 ಸಾವಿರ ಜನಸಂಖ್ಯೆಯನ್ನು ಪ್ರಪಂಚದಾದ್ಯಾಂತ ಹೊಂದಿರುವ ಕೊಡವ ಜನಾಂಗವು ‘ಕೊಡವಾಮೆ’ ಎನ್ನುವ ಸಂಪ್ರದಾಯಕ್ಕೆ ಬದ್ಧವಾಗಿದೆ. ತಮ್ಮದೇ ಆದ ವಿಶಿಷ್ಠ ಧಾರ್ಮಿಕ ವಿಧಿ ವಿಧಾನಗಳನ್ನು ಆಚರಿಸಿಕೊಂಡು ಬರುತ್ತಿದ್ದು, ಬುದ್ಧ, ಹಾಗೂ ಜೈನರಂತೆ ಅದೈವಿಕ ಪಂಗಡವಾಗಿ ಗುರುತಿಸಿಕೊಂಡ ಈ ರಾಜ್ಯದ ಅತ್ಯಂತ ಪ್ರಮುಖ ಹಾಗೂ ಸೂಕ್ಷ್ಮ ಅಲ್ಪಸಂಖ್ಯಾತ ಜನಾಂಗವಾಗಿದೆ ಎಂದು ಹೇಳಿದರು.
ಕೊಡವ ಜನಾಂಗವು ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಖ್ಯಾಬಲದ ಕೊರತೆಯಿಂದ ಮೂಲೆಗುಂಪಾಗುತ್ತಿದ್ದು, ತನ್ನ ಮೂಲ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಆದ್ದರಿಂದ ಬೌಧ ಜೈನರಂತೆ ಕೊಡವರನ್ನು ಧಾರ್ಮಿಕ ಅಲ್ಪಸಂಖ್ಯಾತರೆಂದು ಘೋಸಿಷಬೇಕೆಂದು ಆಗ್ರಹಿಸಿದರು. ಕೊಡವರು ಅನಾದಿಕಾಲದಿಂದಲೂ ಅದೈವಿಕ ಸಂಪ್ರದಾಯವನ್ನು ರೂಡಿಸಿಕೊಂಡವರಾಗಿದ್ದು, ನಾನಾ ಪ್ರಭಾವಕ್ಕೊಳಗಾಗಿ ಮೇಲ್ನೊಟಕ್ಕೆ ವೈದಿಕ ವ್ಯವಸ್ಥೆಯನ್ನು ಹಿಂಬಾಲಿಸುತ್ತಿರುವಂತಿದ್ದರೂ, ಕೊಡವ ಮೂಲ ಆಚರಣೆಗಳಲ್ಲೆಲ್ಲೂ ವೈದಿಕ ಪರಂಪರೆಯ ಯಾವದೇ ಕುರುಹುಗಳು ಗೋಚರಿಸುವದಿಲ್ಲ ಎಂದು ವಿವರಿಸಿದರು.
ಕೊಡವರ ಇತಿಹಾಸವನ್ನು ಗಮನಿಸಿದರೆ ಕಾವೇರಿ ಪುರಾಣಕ್ಕೂ ಹಿಂದಿನ ಅಸ್ತಿತ್ವ ನಮ್ಮದೆಂಬದು ಗೋಚರಿಸುತ್ತದೆ. ಮೂಲತಃ ನಾವು ಪ್ರಕೃತಿ ಆರಾಧಕರಾಗಿದ್ದು, ನಮ್ಮ ಪೂರ್ವಜರನ್ನು ಪೂಜಿಸುವ ಸಂಪ್ರದಾಯವನ್ನು ಮೈಗೂಡಿಸಿಕೊಂಡಿರುವವರಾಗಿದ್ದೇವೆ ಎಂದು ವಿವರಿಸಿದ ಮಂಜು ಚಿಣ್ಣಪ್ಪ, ಕೊಡವರ ಯಾವದೇ ಆಚಾರ, ವಿಚಾರಗಳಲ್ಲಿ ಎಲ್ಲೂ ಪುರೋಹಿತ ಶಾಹಿಯ ನೆರಳು ಕಂಡುಬರುವದಿಲ್ಲ. ನಮ್ಮ ಪೂರ್ವಜರು ಕಣ್ಣಿಗೆ ಕಾಣುವ ಪ್ರಕೃತಿಯಲ್ಲಿನ ಗಾಳಿ, ನೀರು, ಬೆಂಕಿ, ಮರ, ಗಿಡಗಳು ಹಾಗೂ ಭೂಮಿಯನ್ನು ಆರಾಧಿಸುತ್ತಾ ಬಂದಿದ್ದಾರೆ. ಹಾಗೆಯೇ ನಾವು ಈ ದೇಶ ಹಾಗೂ ರಾಜ್ಯದಲ್ಲಿ ಅತ್ಯಂತ ಸೂಕ್ಷ್ಮ ಅಲ್ಪಸಂಖ್ಯಾತರಾಗಿ ಉಳಿದುಕೊಂಡಿದ್ದೇವೆ. ಹೀಗಾಗಿ ಸರ್ಕಾರ ಕೊಡವರನ್ನು ಆದ್ಯತೆಯ ಮೇರೆ ಸಂವಿಧಾನಿಕವಾಗಿ ಅಲ್ಪಸಂಖ್ಯಾತರೆಂದು ಪರಿಗಣಿಸಿ ಧಾರ್ಮಿಕ ಅಲ್ಪಸಂಖ್ಯಾತರ ಕೋಡ್ ನೀಡುವಂತೆ ಈ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತಿರುವದಾಗಿ ಮಂಜು ಚಿಣ್ಣಪ್ಪ ಹೇಳಿದರು.
ಇಂದು ವೈದಿಕ ಹಿನ್ನೆಲೆಯಲ್ಲಿ ಶೈವಾರಾಧಕರಾಗಿ ಲಿಂಗದಾರಿಗಳೂ ಆಗಿರುವ ವೀರಶೈವ ಲಿಂಗಾಯಿತರನ್ನು 80 ಲಕ್ಷದಷ್ಟಿರುವ ಲಿಂಗಾಯಿತರನ್ನು ಸರ್ಕಾರ ಅಲ್ಪಸಂಖ್ಯಾತರೆಂದು ಪರಿಗಣಿಸಲು ಹೊರಟಿರುವಾಗ ನಾವು ಖಂಡಿತವಾಗಿಯೂ ಎಲ್ಲರಿಗಿಂತ ಧಾರ್ಮಿಕ ಅಲ್ಪಸಂಖ್ಯಾತರ ಸ್ಥಾನ ಮಾನವನ್ನು ಹೊಂದಲು ಅರ್ಹರಾಗಿದ್ದೇವೆ. ಈ ನಿಟ್ಟಿನಲ್ಲಿ ಸರ್ಕಾರ ನಮ್ಮ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಅವರು ಹೇಳಿದರು..
ದೇಶದ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಅತಂತ್ರರಾಗಿರುವ ಕೊಡವ ಸಮುದಾಯ, ರಾಜಕೀಯವಾಗಿ ಅಸ್ತಿತ್ವವನ್ನು ಕಳೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ತೊಂದರೆಗಳನ್ನು ಅನುಭವಿಸಬೇಕಾಗಬಹುದು. ಶಿಕ್ಷಣ, ಉದ್ಯೋಗ ಮುಂತಾದ ರಂಗದಲ್ಲಿ ಬಹುಸಂಖ್ಯಾತರೊಡನೆ ಪೈಪೋಟಿ ನಡೆಸಬೇಕಾದ ಅನಿವಾರ್ಯತೆಯಿಂದ ಇಂದು ಯಾವದೇ ಸರ್ಕಾರಿ ರಂಗದಲ್ಲಿ ಕೊಡವರು ಉದ್ಯೋಗ ಪಡೆಯುವಲ್ಲಿ ವಿಫಲರಾಗುತ್ತಿದ್ದು, ಇಂದು ಧಾರ್ಮಿಕ ಮೀಸಲಾತಿ ದೊರೆತಲ್ಲಿ ಸಮುದಾಯವು ಇನ್ನಷ್ಟು ದೇಶ ಸೇವೆಗೆ ವಿವಿಧ ರಂಗಗಳಲ್ಲಿ ತೊಡಗಿಸಿಕೊಳ್ಳಲು ಪ್ರಯೋಜನವಾಗಲಿದೆ ಎಂದು ಅಭಿಪ್ರಾಯ ಪಟ್ಟರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಚೆಪ್ಪುಡೀರ ಸುಜು ಕರುಂಬಯ್ಯ, ನೆಲ್ಲಮಕ್ಕಡ ಮಾದಯ್ಯ ಹಾಜರಿದ್ದರು.