ಶ್ರೀಮಂಗಲ, ಮಾ. 22: ಸಾಲ ಭಾದೆಯಿಂದ ಇದೇ ತಾ. 15 ರಂದು ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸಣ್ಣ ಹಿಡುವಳಿಯ ಕಾಫಿ ಬೆಳೆಗಾರ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಬಾಡಗರಕೇರಿ ಗ್ರಾಮದ ಅಣ್ಣೀರ ಹರೀಶ್ ಮೊಣ್ಣಪ್ಪ ಅವರ ಮನೆಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅವರು ಭೇಟಿ ನೀಡಿ ವೈಯಕ್ತಿಕ ರೂ. 50 ಸಾವಿರ ನಗದು ನೆರವನ್ನು ಮೃತ ಬೆಳೆಗಾರ ಹರೀಶ್ ಅವರ ಪತ್ನಿ ಸುಜು ದೇವಮ್ಮ ಅವರಿಗೆ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಇದೇ ಸಂದರ್ಭ ಜೆಡಿಎಸ್ ಜಿಲ್ಲಾಧ್ಯಕ್ಷ ಕುಮಾರ ಸ್ವಾಮಿಯವರನ್ನು ಸಂಪರ್ಕಿಸಿ ದೂರವಾಣಿ ಮೂಲಕ ಸಂತ್ರಸ್ತ ಕುಟುಂಬದ ಸುಜು ದೇವಮ್ಮ ಅವರೊಂದಿಗೆ ಮಾತನಾಡಿಸಿದರು. ಈ ಸಂದರ್ಭ ಕುಮಾರಸ್ವಾಮಿಯವರು ತಾವು ಕೊಡಗಿಗೆ ಬಂದಾಗ ಮನೆಗೆ ಭೇಟಿ ನೀಡುವದಾಗಿ ಹೇಳಿದರಲ್ಲದೆ, ಈಗ ಉಂಟಾಗಿರುವ ಸಂಕಷ್ಟದ ಸ್ಥಿತಿಗೆ ಧೃತಿಗೆಡುವದು ಬೇಡ, ಬೆಳೆಗಾರರ ಸಂಕಷ್ಟಕ್ಕೆ ಸ್ಪಂಧಿಸುವ ದೆೃರ್ಯ ಹೇಳಿದರು.
ಈ ಸಂದರ್ಭ ಮಾತನಾಡಿದ ಸಂಕೇತ್ ಪೂವಯ್ಯ ಅವರು, ಜಿಲ್ಲೆಯಲ್ಲಿ ಕಳೆದ 5 ವರ್ಷದಲ್ಲಿ 41 ರೈತರು ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ 3781 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಕಾಫಿ ಹಾಗೂ ಕರಿಮೆಣಸು ಬೆಳೆಗಾರರು ಪಸಲು ಕುಂಠಿತ ಹಾಗೂ ಸರ್ಕಾರದ ಅವೈಜ್ಞಾನಿಕ ಆಮದು ನೀತಿಯಿಂದ ದರ ಕುಸಿತದಿಂದ ಸಂಕಷ್ಟ ಎದುರಿಸುತಿದ್ದಾರೆ.
(ಮೊದಲ ಪುಟದಿಂದ) ಕರಿಮೆಣಸು ದರ 750 ಇದ್ದದ್ದೂ 340ಕ್ಕೆ ಇಳಿದಿದೆ. ಕಾಫಿ ಧಾರಣೆಯೂ ಕುಸಿದಿದೆ. ಸಂಸದ ಪ್ರತಾಪ್ ಸಿಂಹ ಅವರು ಕಡಿಮೆ ದರಕ್ಕೆ ಕರಿಮೆಣಸನ್ನು ಮಾರಾಟ ಮಾಡಬೇಡಿ ಈ ಬಗ್ಗೆ ಕೇಂದ್ರದೊಂದಿಗೆ ಪ್ರಯತ್ನಿಸಿ ಹೆಚ್ಚಿನ ಬೆಲೆ ಬರುವಂತೆ ಕಾರ್ಯತತ್ಪರವಾಗು ವದಾಗಿ ಭರವಸೆ ನೀಡಿದ್ದರೂ ಇದುವರೆಗೆ ಅವರು ಸ್ಪಂದಿಸಿಲ್ಲ. ರಾಜ್ಯ ಸರ್ಕಾರ ಕೂಡ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹೊಸೂರು ರಮೇಶ್ ಜೋಯಪ್ಪ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾಣತ್ತಲೆ ವಿಶ್ವನಾಥ್, ಜಿಲ್ಲಾ ಉಪಾಧ್ಯಕ್ಷ ಕೆ.ಸಿ. ನಾಣಯ್ಯ, ಜಿಲ್ಲಾ ವಕ್ತಾರ ಅದೀಲ್ ಪಾಶ, ವೀರಾಜಪೇಟೆ ಕ್ಷೇತ್ರ ಅಧ್ಯಕ್ಷ ಮತೀನ್, ಮಹಿಳಾ ಅಧ್ಯಕ್ಷೆ ಸುಮಿತ್ರ, ಉಪಾಧ್ಯಕ್ಷೆ ಜಯಮ್ಮ, ಕಾರ್ಯದರ್ಶಿ ವೀಣಾ, ಅಮ್ಮಂಡ ವಿವೇಕ್, ಜಿಲ್ಲಾ ಜಂಟಿ ಕಾರ್ಯದರ್ಶಿ ಪಾಪಣ್ಣ, ಪ್ರ.ಕಾರ್ಯದರ್ಶಿ ಚನ್ನ ಬಸಪ್ಪ, ಮಡಿಕೇರಿ ಕ್ಷೇತ್ರ ಮುಖಂಡ ಡಿ.ಪಿ. ಬೋಜಪ್ಪ, ವೀರಾಜಪೇಟೆ ನಗರಾಧ್ಯಕ್ಷ ಮಂಜುನಾಥ್, ಕ್ಷೇತ್ರ ಸಾಮಾಜಿಕ ಜಾಲತಾಣದ ಅಧ್ಯಕ್ಷ ರಾಕೇಶ್ ಬಿದ್ದಪ್ಪ, ಟಿ. ಶೆಟ್ಟಿಗೇರಿ ವಲಯ ಅಧ್ಯಕ್ಷ ಪರಮಲೆ ಗಣೇಶ್, ವಿ.ಸಿ. ದೇವರಾಜ್ ಮತ್ತಿತರರು ಹಾಜರಿದ್ದರು.