ಮಡಿಕೇರಿ, ಮಾ.22 : ಕೊಂಡಂಗೇರಿ ದರ್ಗಾ ಶರೀಫ್ನಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಮುಹಮ್ಮದ್ ಪೈಗಂಬರರ ಸಂತತಿ ಪುತ್ರರಾಗಿರುವ ಅಸ್ಸಯ್ಯಿದ್ ಅಬ್ದುಲ್ಲಾಹಿ ಸಖಾಫ್ ಅಳ್ ಹಳ್ರಮಿ ಹಾಗೂ ಸಮೀಪದ ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿಗೊಳ್ಳುತ್ತಿರುವ ಪವಾಡ ಪುರುಷರ ಹೆಸರಿನಲ್ಲಿ ಪ್ರತೀ ವರ್ಷ ನಡೆಸಿಕೊಂಡು ಬರಲಾಗುತ್ತಿರುವ ಉರೂಸ್ ಸಮಾರಂಭ ತಾ. 23ರಿಂದ (ಇಂದಿನಿಂದ) ತಾ. 29ರವರೆಗೆ ನಡೆಯಲಿದೆ ಗುರುವಾರ ಇಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೊಂಡಂಗೇರಿಯ ಸುನ್ನಿ ಮುಸ್ಲಿಂ ಜಮಾಅತ್ ಸದಸ್ಯ ಹನೀಫ್ ಸಖಾಫಿ ಹಾಗೂ ಇತರರು, ತಾ. 23ರ ಅಪರಾಹ್ನ 2 ಗಂಟೆಗೆ ಮಖಾಂ ಅಲಂಕಾರ, ಕಥಂದುಆ ಹಾಗೂ ಸಾಮೂಹಿಕ ಪ್ರಾರ್ಥನೆಯೊಂದಿಗೆ ಊರೂಸ್ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ಆದೂರಿನ ಅಸ್ಸಯ್ಯಿದ್ ಟಿ.ವಿ.ಉಂಬು ತಂಞಳ್ ಹಾಗೂ ಕೊಂಡಂಗೇರಿಯ ಅಬ್ದುಲ್ಲಾಹಿ ಸಖಾಫ್ ವಲಿಯುಲ್ಲಾಹಿರವರ 5ನೇ ಸಂತತಿ ಪುತ್ರರಾಗಿರುವ ಅಸ್ಸಯ್ಯಿದ್ ಹಸನ್ ಸಖಾಫಿ ಅವರುಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಬಳಿಕ ಧ್ವಜಾರೋಹಣ ಜರುಗಲಿದೆ ಎಂದು ತಿಳಿಸಿದರು.
ಉರೂಸ್ ಅಂಗವಾಗಿ ಪ್ರತೀದಿನ ರಾತ್ರಿ 8.30ಕ್ಕೆ ವಿವಿಧ ವಿಷಯಗಳಲ್ಲಿ ಖ್ಯಾತ ವಾಗ್ಮಿಗಳಿಂದ ಉಪನ್ಯಾಸ ಕಾರ್ಯಕ್ರಮ ಜರುಗಲಿದ್ದು, ಅದರಂತೆ ತಾ. 24ರ ರಾತ್ರಿ ಗೂಡಲ್ಲೂರಿನ ಮಸೂದ್ ಸಖಾಫಿ ಅವರಿಂದ ಔಲಿಯಾಗಳ ಲೋಕ ಎಂಬ ವಿಷಯದ ಕುರಿತು, ತಾ. 25ರಂದು ಕಾಂತಪುರಂನ ಮುಹಮ್ಮದ್ ರಾಫಿ ಅಹ್ಸನಿ ಅವರಿಂದ ‘ಲಹರಿಯಿಲ್ ಮಯಙುನ್ನ ಜನ್ಮಂಗಳ್’ ಎಂಬ ವಿಷಯದ ಕುರಿತು, ತಾ. 26ರಂದು ಪೆರೋಡ್ ಅಬ್ದುಲ್ ರೆಹಮಾನ್ ಸಖಾಫಿ ಅವರಿಂದ ಆತ್ಮ ಸಂಸ್ಕರಣಂ ಎಂಬ ವಿಷಯದ ಕುರಿತು, ತಾ. 27ರಂದು ಕಳಸ ನೌಫಲ್ ಸಖಾಫಿ ಅವರಿಂದ ಸ್ವರ್ಗ ಮತ್ತು ನರಕ ಎಂಬ ವಿಷಯದ ಕುರಿತು, ತಾ. 28ರಂದು ಕಿಲ್ಲೂರಿನ ಅಬ್ದುಲ್ ಸಖಾಫಿ ಅವರಿಂದ ಗುರಿ ತಪ್ಪುತ್ತಿರುವ ಮಹಿಳೆಯರು, ತಾ. 29ರ ರಾತ್ರಿ ಕಾಂತಪುರಂ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರಿಂದ ಹಾದಿ ತಪ್ಪುತ್ತಿರುವ ಯುವಜನತೆ ಎಂಬ ವಿಷಯಗಳ ಕುರಿತು ಉಪನ್ಯಾಸ ಜರುಗಲಿದೆ ಎಂದು ವಿವರಿಸಿದರು.
ತಾ.26ರಂದು ಪೂರ್ವಾಹ್ನ 10 ಗಂಟೆಗೆ ಉರೂಸ್ ಸೌಹಾರ್ದ ಸಮ್ಮೇಳನ ಕೊಡಗು ಜಿಲ್ಲಾ ನಾಯಿಬ್ ಖಾಝಿ ಕೆ.ಎ.ಮುಹಮ್ಮದ್ ಮುಸ್ಲಿಯಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಅಂದು ಸಂಜೆ 4 ಗಂಟೆಯಿಂದ ಮೌಲೂದ್ ಪಾರಾಯಣ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕೊಂಡಂಗೇರಿ ಸುನ್ನಿ ಮುಸ್ಲಿಂ ಜಮಾಅತ್ನ ಎರಡನೇ ತಕ್ಕ ಮುಖ್ಯಸ್ಥ ಕೆ.ಎಂ. ಯಾಹ್ಯ, ಅಧ್ಯಕ್ಷ ಕೆ.ವೈ ಮುಹಮ್ಮದ್, ಸದಸ್ಯ ಪಿ.ಎ.ಆಲಿ ಹಾಜರಿದ್ದರು.