ಶನಿವಾರಸಂತೆ, ಮಾ. 21: ಪೊಲೀಸರ ಕರ್ತವ್ಯದಲ್ಲಿ ಸಾರ್ವಜನಿಕರ ಸಹಕಾರ ಪ್ರಮುಖವಾಗಿದ್ದು, ಜನಸಾಮಾನ್ಯರು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ನೂತನ ಪಿಎಸ್‍ಐ ಎನ್. ಆನಂದ್ ಅಭಿಪ್ರಾಯಪಟ್ಟರು.

ಪಟ್ಟಣದ ಪೊಲೀಸ್ ಠಾಣೆಗೆ ಟಿ. ನರಸೀಪುರ ಠಾಣೆಯಿಂದ ವರ್ಗಾವಣೆಯಾಗಿ ಬಂದಿರುವ ಅವರು, ಅಧಿಕಾರ ಸ್ವೀಕರಿಸಿದ ಬಳಿಕ ಸೋಮವಾರ ಠಾಣೆಯಲ್ಲಿ ನಡೆದ ಜನಸಾಮಾನ್ಯರು, ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಪೊಲೀಸರ ಸಹಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚುನಾವಣೆ ಸಮೀಪಿಸು ತ್ತಿರುವದರಿಂದ ಸಾರ್ವಜನಿಕರ ರಕ್ಷಣೆ ಸಲುವಾಗಿ ಪೊಲೀಸರು ಕಟ್ಟುನಿಟ್ಟಾಗಿ ಕಾನೂನು ಪಾಲಿಸಬೇಕಾಗುತ್ತದೆ. ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುವ ದೇವಾಲಯಗಳ ದೇವರ ಉತ್ಸವ, ಜಾತ್ರಾ ಮಹೋತ್ಸವ, ಕ್ರೀಡಾಕೂಟ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸುವ ವಾರದ ಮುಂಚೆ ಪೊಲೀಸ್ ಠಾಣೆಯಲ್ಲಿ ಅನುಮತಿ ಪಡೆಯಬೇಕು. ಪ್ರಚಾರದ ಬ್ಯಾನರ್, ಬಂಟಿಂಗ್ ಕಟೌಟ್ ಇತ್ಯಾದಿಗಳನ್ನು ಅಳವಡಿಸುವ ಮೊದಲು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಠಾಣೆಯಲ್ಲಿ ಸಂಘಟಕರು ಅನುಮತಿ ಪಡೆದುಕೊಳ್ಳಬೇಕು. ಮುಕ್ತಾಯದ ನಂತರ ತೆರವುಗೊಳಿಸಬೇಕು ಎಂದು ಮನವಿ ಮಾಡಿದರು. ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಅಕ್ರಮ ಮರಳು ದಂಧೆ ಮತ್ತು ಮರ ಸಾಗಾಣಿಕೆ ಇತ್ಯಾದಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸಂಘ-ಸಂಸ್ಥೆಗಳ ಪ್ರಮುಖರು ಸಭೆಯಲ್ಲಿ ಪ್ರಸ್ತಾಪಿಸಿದರು. ಸ್ಪಂದಿಸಿದ ಪಿಎಸ್‍ಐ ಆನಂದ್, ಸಾರ್ವಜನಿಕರು ಈ ಕುರಿತು ಮಾಹಿತಿ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳುವ ಹಾಗೂ ಆ ವಿಭಾಗದಲ್ಲಿ ನಡೆÉಯುತ್ತಿರುವ ಯಾವದೇ ಅಕ್ರಮ ಚಟುವಟಿಕೆಗಳಿಗೆ 15 ದಿನದ ಒಳಗೆ ಕಡಿವಾಣ ಹಾಕಲಾಗುವದು ಎಂದರು.

ಪಟ್ಟಣದ ಟ್ರಾಫಿಕ್ ಸಮಸ್ಯೆ, ದ್ವಿಚಕ್ರ ವಾಹನದಲ್ಲಿ ಮೂವರು ಸವಾರ ರೊಂದಿಗೆ ಚಾಲನೆ ಮಾಡುವದು ಇತ್ಯಾದಿ ಸಮಸ್ಯೆಗಳ ಕುರಿತು ಸಾರ್ವಜನಿಕರು ಚರ್ಚೆ ನಡೆಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಸರೋಜಮ್ಮ, ಪುಟ್ಟರಾಜು, ಶನಿವಾರಸಂತೆ, ದುಂಡಳ್ಳಿ ಹಾಗೂ ನಿಡ್ತ 3 ಗ್ರಾಮ ಪಂಚಾಯಿತಿಗಳ ಅಧ್ಯಕ್ಷರಾದ ಮಹಮ್ಮದ್ ಗೌಸ್, ಸಿ.ಜೆ. ಗಿರೀಶ್, ಮುಸ್ತಾಫ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಪ್ರತಾಪ್, ವಿಶ್ವ ಹಿಂದೂ ಪರಿಷತ್ ಹೋಬಳಿ ಅಧ್ಯಕ್ಷ ಪ್ರದೀಪ್ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.