ಭಾಗಮಂಡಲ, ಮಾ. 21: ಇಲ್ಲಿಗೆ ಸಮೀಪದ ಸಣ್ಣಪುಲಿಕೋಟು ಗ್ರಾಮದ ಮಂದತಿರಿಕೆ ಭಗವತಿ ದೇವಾಲಯದಲ್ಲಿ ಭಗವತಿ ದೇವಿ ಹಾಗೂ ಶಾಸ್ತಾವು ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ ತಾ. 20ರಿಂದ ಆರಂಭಗೊಂಡಿದ್ದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

ಮಂಗಳವಾರ ಸಾಮೂಹಿಕ ಪ್ರಾರ್ಥನೆಯೊಂದಿಗೆ ದೇವಾಲಯದಲ್ಲಿ ವಾಸ್ತುಪೂಜೆ ವಾಸ್ತುಹೋಮ, ದಿಕ್ಪಾಲಕ ಬಲಿ ಹಾಗೂ ಮಹಾಪೂಜೆ ನೆರವೇರಿಸಲಾಯಿತು. ಇಂದು ಮಧ್ಯಾಹ್ನ ಗಣಪತಿ ಹೋಮ ನೆರವೇರಿತು. ಮಹಾಪೂಜೆಯ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ಅಂಕುರ ಪೂಜೆ ದುರ್ಗಾಪೂಜೆ, ಮಂಟಪ ಸಂಸ್ಕಾರಗಳು ನೆರವೇರಿದವು. ತಾ. 22 ರಂದು (ಇಂದು) ಬೆಳಿಗ್ಗೆ ಆರುಗಂಟೆಯಿಂದ ಗಣಪತಿ ಹೋಮ ಅಗ್ನಿಸಂಸ್ಕಾರ, ಕಳಶ ಪೂಜೆ, ಅಂಕುರ ಪೂಜೆ, ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ತಾ. 26ರಂದು ಶ್ರೀ ಭಗವತಿ ದೇವರಿಗೆ ಹಾಗೂ ಶ್ರೀ ಶಾಸ್ತಾವು ದೇವರಿಗೆ ಬ್ರಹ್ಮಕಳಶಾಭಿಷೇಕಗಳು ಜರುಗಲಿವೆ. ಪ್ರಮುಖರಾದ ಪಟ್ಟಮಾಡ ಅಪ್ಪಣ್ಣ, ಕುಯ್ಯಮುಡಿ ಉದಯಕುಮಾರ್, ಕುಯ್ಯಮುಡಿ ಮನೋಜ್, ತೀರ್ಥಕುಮಾರ್, ಉದಿಯನ ಲವ, ಕುಯ್ಯಮುಡಿ ಲವ,ಕುಂಡ್ಯನ ಚರಣ್, ಕಾವೇರಿಮನೆ ಶೇಖರ್, ಕುಂಡ್ಯನ ರವೀಂದ್ರ ಸೇರಿದಂತೆ ಗ್ರಾಮಸ್ಥರ ತಂಡ ಪ್ರತಿಷ್ಠಾಪನಾ ಕಾರ್ಯಕ್ಕೆ ಮುಂದಾಗಿದ್ದು, ತಲಕಾವೇರಿಯ ಪ್ರಶಾಂತ್ ಆಚಾರ್ಯ ಅವರ ನೇತೃತ್ವದಲ್ಲಿ ತಾ. 26ರಂದು ದೇವರ ಪ್ರತಿಷ್ಠಾಪನೆ ನಡೆಯಲಿದೆ. ದೇವಾಲಯದಲ್ಲಿ ಸುಮಾರು 28 ವರ್ಷಗಳಿಂದ ಉತ್ಸವವು ಸ್ಥಗಿತಗೊಂಡಿತ್ತು. ಹಲವು ವರ್ಷಗಳಿಂದ ಉತ್ಸವ ನೀರೀಕ್ಷೆಯಲ್ಲಿದ್ದ ಗ್ರಾಮಸ್ಥರು ಇದೀಗ ದೇವಾಲಯದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.

-ಕುಯ್ಯಮುಡಿ ಸುನಿಲ್