ಕುಶಾಲನಗರ, ಮಾ. 21: ಕುಶಾಲನಗರ ಸಮೀಪದ ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯ ಶ್ರೀ ಬಸವೇಶ್ವರ ಬಡಾವಣೆ ನಿವಾಸಿಗಳಿಗೆ ಕುಡಿಯುವ ನೀರಿನ ವಿಚಾರದಲ್ಲಿ ಗ್ರಾಮ ಪಂಚಾಯಿತಿಯ ಕೆಲವು ಸದಸ್ಯರು ಕಿರುಕುಳದೊಂದಿಗೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಬಡಾವಣೆಯ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸುದೀಪ್ ಕುಮಾರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಇತ್ತೀಚೆಗೆ ಶಾಸಕರ ಅನುದಾನದಿಂದ ಕೊಳವೆ ಬಾವಿ ತೆರೆಯಲಾಗಿದ್ದು ಈ ಮೂಲಕ ಬಡಾವಣೆ ನಿವಾಸಿಗಳಿಗೆ ಕುಡಿಯುವ ನೀರು ಪೂರೈಸ ಲಾಗುತ್ತಿದೆ.
ಆದರೆ ಮುಳ್ಳುಸೋಗೆ ಪಂಚಾಯಿತಿಯ ಸದಸ್ಯ ಶಿವಾನಂದ ಮತ್ತಿತರರು ಬಡಾವಣೆ ನಿವಾಸಿಗಳಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದು, ಯುಗಾದಿಯ ದಿನ ಘಟಕದ ಬೀಗ ಮುರಿದು ಟ್ಯಾಂಕರ್ ಮೂಲಕ ನೀರು ಕೊಂಡೊಯ್ದಿದ್ದಾರೆ. ಈ ಸಂದರ್ಭ ಬಡಾವಣೆಯ ನೀರಿನ ಪೈಪ್‍ಲೈನ್ ಗಳನ್ನು ಹಾನಿ ಮಾಡಿ ಅಪಾರ ಪ್ರಮಾಣದ ನೀರು ಪೋಲು ಮಾಡಿದ್ದಾರೆಂದು ಆರೋಪಿಸಿದರು.
ಬಡಾವಣೆಯಲ್ಲಿ ಹಿತರಕ್ಷಣಾ ಸಮಿತಿ ಮೂಲಕ ನಿವಾಸಿಗಳಿಂದ ಮಾಸಿಕ ಶುಲ್ಕ ಸಂಗ್ರಹಿಸಿ ಸಮರ್ಪಕ ರೀತಿಯಲ್ಲಿ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದ್ದರೂ ಪಂಚಾಯಿತಿ ಸದಸ್ಯರು ಅನಾವಶ್ಯಕ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಜಿ.ಪಂ. ಅಧಿಕಾರಿಗಳಿಗೆ ದೂರು ನೀಡಲಾಗಿದೆ.
ಶಾಸಕರ ಗಮನಕ್ಕೂ ತರಲಾಗಿದೆ ಎಂದಿರುವ ಸುದೀಪ್, ಈ ಬಗ್ಗೆ ಗಮನಹರಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಿದೆ ಎಂದು ಅವರು ಆಗ್ರಹಿಸಿದರು.
ಗೋಷ್ಠಿಯಲ್ಲಿ ಸಮಿತಿ ಪ್ರಮುಖರಾದ ರವಿಕುಮಾರ್, ಮೊಣ್ಣಪ್ಪ, ಕುಶಾಲಪ್ಪ, ಅರವಿಂದ ಬಾಬು, ಲವ ಕುಮಾರ್, ರಾಜುಮೂರ್ತಿ, ಫಿಲಿಪ್ ಇದ್ದರು.