ಸಿದ್ದಾಪುರ, ಮಾ. 21: ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಚಲನ ವಲನ ಕಂಡುಹಿಡಿಯಲು ಅರಣ್ಯ ಇಲಾಖೆಯ ವತಿಯಿಂದ ಕಾಡಾನೆಯೊಂದಕ್ಕೆ ರೇಡಿಯೋ ಕಾಲರ್ ಅಳವಡಿಸಲಾಗಿದೆ. ಸಿದ್ದಾಪುರ ವ್ಯಾಪ್ತಿಯ ಮಾಲ್ದಾರೆ ಘಟ್ಟದಳ್ಳ ವ್ಯಾಪ್ತಿಯಲ್ಲಿ ಮಿತಿಮೀರಿದ ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾಡಾನೆಗಳಿಗೆ ರೇಡಿಯೋ ಕಾಲರ್ ಉಪಕರಣವನ್ನು ಅಳವಡಿಸಲಾಗಿದೆ ಎಂದು ವೀರಾಜಪೇಟೆ ಡಿ.ಸಿ.ಎಫ್. ಮರಿಯಾ ಕ್ರಿಸ್ತರಾಜ್ ತಿಳಿಸಿದರು.

ಮಾಲ್ದಾರೆ ವ್ಯಾಪ್ತಿಯ ಬಾಡಗ ಬಾಣಂಗಾಲ ವ್ಯಾಪ್ತಿಯ ಕಾಫಿ ತೋಟದಲ್ಲಿ ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸಲು ಸಿದ್ದಾಪುರ ಸಮೀಪದ ಬಿ.ಬಿ.ಟಿ.ಸಿ. ಸಂಸ್ಥೆಗೆ ಸೇರಿದ ಚೌಡಿಕಾಡು ಕಾಫಿ ತೋಟದಲ್ಲಿ ಅಂದಾಜು 30 ವರ್ಷ ಪ್ರಾಯದ ಹೆಣ್ಣಾನೆಯೊಂದಕ್ಕೆ ರೇಡಿಯೋ ಕಾಲರ್ ಅಳವಡಿಸಲಾಯಿತು. ರೇಡಿಯೋ ಕಾಲರ್ ಮೂಲಕ ಕಾಡಾನೆಗಳು ಎಲ್ಲಿದೆ ಎಂಬ ಸಂದೇಶವು ವೀರಾಜಪೇಟೆಯ ಡಿ.ಸಿ.ಎಫ್. ಮರಿಯಾ ಕ್ರಿಸ್ತರಾಜ್ ಅವರ ಮೊಬೈಲ್‍ನಲ್ಲಿ ಆ್ಯಪ್ ಮೂಲಕ ತಿಳಿಯಲಿದೆ. ಈ ಮಾಹಿತಿಯನ್ನು ಆರ್.ಆರ್.ಟಿ. ತಂಡಕ್ಕೆ ರವಾನಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಆರ್.ಆರ್.ಟಿ. ತಂಡ ಸ್ಥಳಕ್ಕೆ ತೆರಳಿ ಕಾಡಾನೆಗಳಿರುವ ಸ್ಥಳದಿಂದ ಓಡಿಸಲು ಹಾಗೂ ಕಾಡಾನೆಗಳ ಇರುವಿಕೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಎಚ್ಚರವಹಿಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಕೂಡ ಆ್ಯಪ್ ಅನ್ನು ಮೊಬೈಲ್‍ಗೆ ಅಳವಡಿಸಲಾಗಿದೆ ಎಂದು ಮರಿಯಾ ಕ್ರಿಸ್ತರಾಜ್ ತಿಳಿಸಿದರು.

ಈ ಸಂದರ್ಭದಲ್ಲಿ ತಿತಿಮತಿ ವಲಯ ಎ.ಸಿ.ಎಫ್. ಶ್ರೀಪತಿ, ವೀರಾಜಪೇಟೆ ಉಪವಿಭಾಗದ ಡಾ. ಮುಜೀಬ್, ವಲಯ ಅರಣ್ಯಾಧಿಕಾರಿ ದೇವಯ್ಯ, ಶ್ರೀನಿವಾಸ್, ಸಿಬ್ಬಂದಿಗಳಾದ ರಂಜನ್, ಗಣಪತಿ ಇನ್ನಿತರರು ಹಾಜರಿದ್ದರು.