ಕೂಡಿಗೆ, ಮಾ. 21: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆಗೋಟೆ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಅಂಬೇಡ್ಕರ್ ನಿಗಮದ ಅನುದಾನ ದಲ್ಲಿ ನಿರ್ಮಾಣಗೊಂಡಿರುವ ನೂತನ ಅಂಬೇಡ್ಕರ್ ಸಮುದಾಯ ಭವನವನ್ನು ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿ, ಮಾತನಾಡಿದ ಶಾಸರು, ಗ್ರಾಮಾಂತರ ಪ್ರದೇಶಗಳಲ್ಲಿ ಸರ್ಕಾರದ ಅನುದಾನವನ್ನು ಸದ್ಬಳಸಿಕೊಂಡು ಗ್ರಾಮಸ್ಥರು ಒಂದೆಡೆ ಸೇರಿ ತಮ್ಮ ಗ್ರಾಮದ ಅಭಿವೃದ್ಧಿಯ ಬಗ್ಗೆ ಚರ್ಚಿಸಲು ಸಮುದಾಯ ಭವನಗಳಿಂದ ಸಹಕಾರಿಯಾಗುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಜಿಲ್ಲಾ ಪಂಚಾಯಿತಿ ಅನುದಾನಗಳಲ್ಲಿ ಹೆಬ್ಬಾಲೆ ಕ್ಷೇತ್ರ ವ್ಯಾಪ್ತಿಗೆ ನಾಲ್ಕು ಸಮುದಾಯಗಳು ಮಂಜೂರಾಗಿದ್ದು, ಇವುಗಳಲ್ಲಿ ಹಳೆಗೋಟೆ, ಹಕ್ಕೆ, ಚಿಕ್ಕಅಳುವಾರ, ಅಬ್ಬೂರುಕಟ್ಟೆ ಗ್ರಾಮಗಳಲ್ಲಿ ನಿರ್ಮಾಣ ಮಾಡಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹೆಬ್ಬಾಲೆ ಗ್ರಾಮ ಪಂಚಾಯಿತಿ ಸದಸ್ಯರಾದ ಅಶೋಕ್, ವಿಜಯ್, ದೇವರಾಜ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಕೇಶ್ ಸೇರಿದಂತೆ ಗ್ರಾಮದ ಅಂಬೇಡ್ಕರ್ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.